ಇತ್ತೀಚಿನ ಸುದ್ದಿ
ಮಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 30 ಅಂಗಡಿಗಳ ಪರವಾನಿಗೆ ರದ್ದು; 68,350 ರೂ. ದಂಡ
08/06/2021, 19:27
ಮಂಗಳೂರು(reporterkarnataka news): ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡಿದ ಮಾರ್ಗಸೂಚಿಯನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 78 ಅಂಗಡಿಗಳಿಗೆ 68,350 ರೂ. ದಂಡ ವಿಧಿಸಲಾಗಿದ್ದು, ಇದರ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಿಗೆ ರದ್ದು ಮಾಡಲಾಗಿದೆ.
ಜಿಲ್ಲಾಡಳಿತದ ಮಾರ್ಗಸೂಚಿಗಳನ್ವಯ ಬೆಳ್ಳಗೆ 6 ರಿಂದ 10 ಗಂಟೆಯವೆರೆಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅನುಮತಿಸದೆ ಇರುವ ವಸ್ತುಗಳ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಮಂಗಳವಾರ ಪಾಲಿಕೆಯ ವಿವಿಧ ತಂಡಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕೋವಿಡ್ 19 ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಈ 78 ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಬೆಳಗ್ಗೆ 10 ಗಂಟೆಯ ಅವಧಿ ಮೀರಿ ಕೋವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರು ಅನಗತ್ಯ ಸಂಚರಿಸುತ್ತಿರುವವರನ್ನು ತಪಾಸಣೆ ನಡೆಸಿದಾಗ ಅನಗತ್ಯ ಓಡಾಟ ಮಾಡಿದ 19 ಪ್ರಕರಣಗಳಿಗೆ 8050 ರೂ. ದಂಡವನ್ನು ವಿಧಿಸಿ ಎಚ್ಚರಿಕೆ ನೀಡಲಾಗಿದೆ.