ಇತ್ತೀಚಿನ ಸುದ್ದಿ
ಮೇಕೆದಾಟು ಯೋಜನೆ; ಮಧ್ಯಸ್ಥಿಕೆಗೆ ಕೇಂದ್ರ ಸರಕಾರ ಸಿದ್ಧ: ಸಚಿವ ಗಜೇಂದ್ರ ಸಿಂಗ್ ಶೇಖಾವತ್
06/03/2022, 10:25
ಬೆಂಗಳೂರು(reporterkarnataka.com): ಮೇಕೆದಾಟು ಯೋಜನೆ ಆಗಲಿ ಅನ್ನೋ ಆಶಯ ನಾನು ವ್ಯಕ್ತಪಡಿಸುತ್ತೇನೆ. ಎರಡೂ ರಾಜ್ಯಗಳು ಕೂತು ಮಾತನಾಡಿದರೆ ಯೋಜನೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಲು ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಯೋಜನೆಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇಂದಿನ ಸಭೆಯಲ್ಲಿ ಮೇಕೆದಾಟು ಯೋಜನೆಯ ವಿಚಾರ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡಿಲ್ಲ, ಈ ಬಗ್ಗೆ ಹೇಳಲು ಸಾಧ್ಯವಿಲ್ಲ. ಜೊತೆಗೆ ಪ್ರಕರಣ ಕೋರ್ಟ್‌ನಲ್ಲಿದೆ. ಹಾಗಾಗಿ ನಾನು ಈ ಕುರಿತು ಮಾತನಾಡುವುದಿಲ್ಲ ಎಂದ ಕೇಂದ್ರ ಸಚಿವರು, ಮೇಕೆದಾಟು ಯೋಜನೆಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿ, ಯೋಜನೆ ಆಗಬೇಕೆನ್ನುವುದು ನನ್ನ ಅಪೇಕ್ಷೆಯೂ ಆಗಿದೆ ಎಂದು ತಿಳಿಸಿದರು.
ಕೆನ್ ಬೆತ್ವಾ ನದಿ ಜೋಡಣೆ ಯೋಜನೆಯಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವೆ ಕೂಡ ಇದೇ ರೀತಿ ಸಮಸ್ಯೆ ಇತ್ತು. ಆದರೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಮೇಕೆದಾಟು ವಿಚಾರದಲ್ಲೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ ಎಂದು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಲಹೆ ನೀಡಿದರು. ಇದೇ ವೇಳೆ ಮಹದಾಯಿ ವಿಚಾರದಲ್ಲೂ ಬೇರೆ ಬೇರೆ ರೀತಿಯ ಸಮಸ್ಯೆ ಇದೆ. ಅದರ ಬಗ್ಗೆ ಕೂಡ ಚರ್ಚೆ ಮಾಡುವುದಿಲ್ಲ ಎಂದರು.
ಕಾಂಗ್ರೆಸ್‌ಗೆ ನೀರಿನ ವಿಚಾರದಲ್ಲಿ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಳೆದ 55 ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಸಮಸ್ಯೆ ಬಗೆಹರಿಸುವ ಬಗ್ಗೆ ಅವರು ಯೋಚಿಸಿಲ್ಲ. ಅವರಿಂದಾಗಿಯೇ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಕೇಂದ್ರ ಸಚಿವರು ಟೀಕಿಸಿದರು.
ಈಶಾನ್ಯ ಕರ್ನಾಟಕದಲ್ಲಿ ಕುಡಿಯುವ ನೀರು ಯುರೇನಿಯಂ ಮಿಶ್ರಿತ ಆಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆ ನೀರು ಕುಡಿಯದಂತೆ ಸೂಚಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಶುದ್ಧೀಕರಿಸಿ ಗ್ರಾಮಸ್ಥರಿಗೆ ಪೂರೈಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ತಿಳಿಸಿದರು.