ಇತ್ತೀಚಿನ ಸುದ್ದಿ
ಉಗಾಂಡದಲ್ಲಿ ತುಳು ಸಂಘಟನೆ ‘ನಮ ತುಳುವೆರ್’ ಸ್ನೇಹಕೂಟ: ಪಿಲಿ ನಲಿಕೆ ಜತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
25/02/2022, 18:16
ಅಜಿತ್ ಶೆಟ್ಟಿ ಕಂಪಲ ಉಗಾಂಡ
info.reporterkarnataka.com
ಕಂಪಲ(ಉಗಾಂಡ): ಇಲ್ಲಿನ ‘ನಮ ತುಳುವೆರ್ ತುಳು ಸಂಘಟನೆಯ ಆಶ್ರಯದಲ್ಲಿ ಕಂಪಲದ ಕಾಪರ್ ಚಿಮಣಿ ರೆಸ್ಟೊರೆಂಟ್‌ನಲ್ಲಿ ಸ್ನೇಹಕೂಟ ನಡೆಯಿತು.
ಸಂಘಟನಾ ಸಮಿತಿ ಸದಸ್ಯ ಹರೀಶ್ ಭಟ್ ಸ್ವಾಗತಿಸಿದರು. ವಿಲ್ಫ್ರೆಡ್ ಬಾರ್ಬೋಜಾ ಅವರಿಂದ ತುಳು ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ವಿವರವಾದ ಭಾಷಣ ನಡೆಯಿತು. ತುಳುಕೂಟದ ಮಾಜಿ ಸದಸ್ಯರಾದ ದಿವಂಗತ ವೆಂಕಟೇಶ್ ಪ್ರಭು ಮತ್ತು ದಿವಂಗತ ಸುಮನ್ ವೆಂಕಟೇಶ್ ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಎಚ್. ವಿ. ಪ್ರಭು ಅವರು ನುಡಿ ನಮನ ಸಲ್ಲಿಸಿದರು. ತುಳು ಕೂಟದ ಸದಸ್ಯರ ಮಕ್ಕಳಿಂದ ಮನರಂಜನಾ ನೃತ್ಯ ಕಾರ್ಯಕ್ರಮಗಳು, ಎಲ್ಲ ವಯೋಮಾನದವರಿಗೂ ಮೋಜಿನ ಆಟಗಳಿದ್ದವು. ಮಧ್ಯಾಹ್ನದ ಭೋಜನದ ನಂತರ ಎಲ್ಲ ಸದಸ್ಯರಿಗೆ ಮುಕ್ತ ನೃತ್ಯ ಮಂಟಪದಲ್ಲಿ ತುಳುನಾಡಿನ ವಾದ್ಯಸ್ವರಕ್ಕೆ ಆಯ್ದ ಸದಸ್ಯರ ಅನೌಪಚಾರಿಕ ಹುಲಿವೇಷ ನೃತ್ಯವು ಆಕರ್ಷಣೆಯ ಕೇಂದ್ರವಾಗಿತ್ತು.
ಕಂಪಲ ತುಳುಕೂಟ ಆಯೋಜಿಸಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ರಾಜಧಾನಿ ನಗರದ ಸುತ್ತ ಮುತ್ತ ಇರುವ ನಿವಾಸಿ ತುಳು ಭಾಷಿಕರು ಮತ್ತು ಪೂರ್ವ ಉಗಾಂಡದ ನಿವಾಸಿ ತುಳುವರು ಸೇರಿ 20 ಮಕ್ಕಳ ಜೊತೆಗೆ 125 ಮಂದಿ ಭಾಗವಹಿಸಿದ್ದರು.
2009ರಲ್ಲಿ ಕರಾವಳಿ ಕರ್ನಾಟಕದ ಆರು ಜನ ಸಮಾನ ಮನಸ್ಕ ತುಳು ಮಾತನಾಡುವ ಜನರು ಹರೀಶ್ ಭಟ್, ಸುಕುಮಾರ್ ಶೆಟ್ಟಿ, ರವಿಕಿರಣ್, ಗಣೇಶ್ ಬಂಗೇರ, ರಿತೇಶ್ ರಾವ್ ಮತ್ತು ಶ್ರೀಶ ಭಟ್ ಅವರು ತುಳು ಭಾಷಿಕರನ್ನು ಒಟ್ಟುಗೂಡಿಸಲು ಕಂಪಲಾದಲ್ಲಿ ತುಳು ಕೂಟವನ್ನು ರಚಿಸಿದರು. ಹರೀಶ್ ಭಟ್, ಸುಕುಮಾರ್ ಶೆಟ್ಟಿ, ರಿಚಿ ಕಾರ್ಕಡ, ರವಿಕಿರಣ್, ಗಣೇಶ್ ಸುವರ್ಣ ಮತ್ತು ಆನಂದ್ ಪೂಜಾರಿ ಅವರನ್ನೊಳಗೊಂಡ ಪ್ರಸ್ತುತ ಸಮಿತಿಯು ಈ ಸಂಪ್ರದಾಯವನ್ನು ಮುಂದುವರೆಸಿದೆ. ಉಗಾಂಡ ದೇಶದಲ್ಲಿರುವ ಎಲ್ಲಾ ತುಳು ಮಾತನಾಡುವ ಜನರನ್ನು ಒಟ್ಟುಗೂಡಿಸಿ, ಹೊಸ ಸದಸ್ಯರನ್ನು ಪರಿಚಯಿಸುವ ಈ ಕಾರ್ಯಕ್ರಮ ಸುಮಾರು ಎರಡು ವರ್ಷಗಳ ನಂತರ ನಡೆಯಿತು.