ಇತ್ತೀಚಿನ ಸುದ್ದಿ
ಕನ್ನಡದ ಹಿರಿಯ ನಟ ಕಲಾತಪಸ್ವಿ ರಾಜೇಶ್ ವಿಧಿವಶ
19/02/2022, 07:49
ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.
ರಾಜೇಶ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ ಅವರಿಗೆ ಬೆಂಗಳೂರಿನ ಕಸ್ತೂರಬಾ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಟ ರಾಜೇಶ್ ಬೆಂಗಳೂರಿನಲ್ಲೇ ಜನಿಸಿದವರು. ಇವರ ನಿಜನಾಮ ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ರಂಗಭೂಮಿ ಪ್ರವೇಶಿಸಿದರು. ತಂದೆ-ತಾಯಿಗೆ ಗೊತ್ತಿಲ್ಲದಂತೆ ‘ಸುದರ್ಶನ ನಾಟಕ ಮಂಡಳಿ’ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು.
1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್ ಇಂದ ರಾಜೇಶ್ ಎಂದು ಬದಲಾಯಿಸಿಕೊಂಡರು. ನಟ ರಾಜೇಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ‘ನಮ್ಮ ಊರು’. ಸಿ.ವಿ.ಶಿವಶಂಕರ್ ನಿರ್ದೇಶನದ ‘ನಮ್ಮ ಊರು’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು.