ಇತ್ತೀಚಿನ ಸುದ್ದಿ
ಕೋಟೆ ಓಬಳಾಪುರ: ಲಕ್ಷ್ಮೀನರಸಿಂಹಸ್ವಾಮಿ ದೇಗುಲಕ್ಕೆ ಮೆರವಣಿಗೆಯಲ್ಲಿ ತೆರಳಿ ಕುಂಭಾಭಿಷೇಕ
15/02/2022, 19:23
ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಳ್ಳಕೆರೆ ತಾಲೂಕಿನ ಕೋಟೆ ಓಬಳಾಪುರ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಗ್ರಾಮದ ಮಹಿಳೆಯರು-ಮಕ್ಕಳು ಕುಂಭ ಹೊತ್ತು ವಿವಿಧ ಜನಪದ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ತೆರಳಿ ಸ್ವಾಮಿಗೆ ಕುಂಭಾಭಿಷೇಕ ಸಲ್ಲಿಸಿದರು.
ಗ್ರಾಮದ ದೇವಸ್ಥಾನ ಸಮಿತಿ, ಹನ್ನೆರೆಡು ಕೈವಾಡಸ್ತರು ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದರು. ಗ್ರಾಮದ ಪ್ರತೀ ಮನೆಗಳಲ್ಲೂ ಮಹಿಳೆಯರು ತಮ್ಮ ಮನೆಯನ್ನು ಸಾರಿಸಿಕೊಂಡು ಸ್ನಾನ ಮಾಡಿ ಹೊಸ ವಸ್ತ್ರಗಳನ್ನುಟ್ಟು ಕಣಗಲೆ ಹೂವು, ಮಲ್ಲಿಗೆ ಸೇವಂತಿಗೆ ಹೂವುಗಳಿಂದ ಹಿಟ್ಟಿನಾರತಿಗಳನ್ನು ಅಲಂಕರಿಸಿ ಹಂಚಿ ಕಡ್ಡಿ, ವೀಳ್ಯದೆಲೆ, ತಂಬಿಟ್ಟು ಹಣ್ಣು ಕಾಯಿಗಳನ್ನು ಆರತಿಯೊಳಗೆ ಇಟ್ಟುಕೊಂಡ ಮಹಿಳೆಯರು, ಮಕ್ಕಳು ಮತ್ತು ಯುವತಿಯರು ತಮ್ಮ ಊರಿನ ಆರಾಧ್ಯ ದೇವರ ಸೇವೆ ಸಲ್ಲಿಸಲು ಅಣಿಯಾದರು.
ಊರಿನಿಂದ ಹೊರವಲಯದ ದೇವಸ್ಥಾನದವರೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಗ್ರಾಮದ ಮುಖ್ಯವೃತ್ತದಲ್ಲಿ ನಂದೀಧ್ವಜ, ನಂದೀಕುಣಿತ, ವಾಲಗ, ಕಹಳೆ, ವೀರಗಾಸೆ, ನಂದೀಕೋಲು ಡೊಳ್ಳುಕುಣಿತ ವಿವಿದ ಜನಪದ ಕುಣಿತಗಳಂತಹ ವಿವಿಧ ಜನಪದ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿ ಜನರನ್ನು ಆಕರ್ಷಿಸಿದವು.
ಕುಂಭ ಹೊತ್ತವರು ಮೆರವಣಿಗೆಯಲ್ಲಿ ತೆರಳಿದರು ನಂತರ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಕುಂಭಾಭಿಷೇಕ ಬಲಿದಾನ, , ಪಂಚಾಮೃತಾಭಿಷೇಕ, ಕುಂಭಾಭಿಷೇಕ , ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಕಲ್ಯಾಣೋತ್ಸವ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಸಂಜೆ ಗ್ರಾಮದ ಈಶ್ವರಸ್ವಾಮಿ ದೇವಸ್ಥಾನದ ಬಳಿ ಲಕ್ಷ್ಮೀನರಸಿಂಹಸ್ವಾಮಿ, ಶ್ರೀದೇವಿ, ಭೂದೇವಿ ಸಮೇತಾ ಉಯ್ಯಾಲೋತ್ಸವ ನಡೆಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿತ್ತು .ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಹನ್ನೆರೆಡು ಕೈವಾಡಸ್ತರು, ಗ್ರಾಮದ ವಿವಿಧ ಸಮುದಾಯದ ಮುಖಂಡರು, ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ಕಲಾವಿದರು ಗ್ರಾಮಸ್ಥರು ಇದ್ದರು.