ಇತ್ತೀಚಿನ ಸುದ್ದಿ
ಹಿಜಾಬ್ ಪ್ರಕರಣ: ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ರಿಟ್ ಅರ್ಜಿ
12/02/2022, 10:45
ಬೆಂಗಳೂರು(reporterkarnataka.com); ರಾಜ್ಯದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿದ
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಶಾಲೆ-ಕಾಲೇಜುಗಳಲ್ಲಿ ಧರಿಸಬಾರದು, ಸ್ಥಗಿತಗೊಂಡಿದ್ದ ಶಾಲೆಗಳನ್ನು ಪುನರಾರಂಭಿಸುವಂತೆ ಹೈಕೋರ್ಟ್ ಗುರುವಾರ ಆದೇಶ ನೀಡಿತ್ತು. ಇದರಂತೆ ಸೋಮವಾರದಿಂದ ಶಾಲೆ-ಕಾಲೇಜುಗಳು ಪುನರಾರಂಭವಾಗಲಿದೆ.
ಹೈಕೋರ್ಟ್ ನೀಡಿರುವ ಮೌಖಿಕ ಆದೇಶವನ್ನು ಪ್ರಶ್ನಿಸಿ ತಮ್ಮ ವಕೀಲರ ಮೂಲಕ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಪಾಲಿಸುವ ಹಕ್ಕನ್ನು ವಿರೋಧಿಸುವ ತೀರ್ಪು ಇದಾಗಿದೆ ಎಂದು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಹಿಜಾಬ್ ವಿವಾದ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಪೂರ್ಣ ವಿಚಾರಣೆ ಬಾಕಿಯಿರುವಾಗಲೇ ಕೆಲವು ವಿದ್ಯಾರ್ಥಿಗಳು ಮಧ್ಯಂತರ ಆದೇಶ ಪ್ರಶ್ನಿಸಿ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.