ಇತ್ತೀಚಿನ ಸುದ್ದಿ
ಮಂಗಳೂರು: ಕೇಂದ್ರ ಬಜೆಟ್ ವಿರುದ್ದ ಎಡಪಕ್ಷಗಳಿಂದ ಭಾರಿ ಪ್ರತಿಭಟನೆ
03/02/2022, 20:24
ಮಂಗಳೂರು(reporterkarnataka.com): ಕೇಂದ್ರ ಬಜೆಟ್ ಜನಸಾಮಾನ್ಯರ ಬದುಕಿಗೆ ಮಾರಕವಾದ ಹಾಗೂ ಶ್ರೀಮಂತರ ಮತ್ತು ಕಾರ್ಪೋರೇಟ್ ಪರವಾದ ಬಜೆಟ್ ಎಂದು ಆರೋಪಿಸಿ ಎಡಪಕ್ಷಗಳ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಬಜೆಟ್ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಕಳೆದ 2 ವರ್ಷಗಳ ಕೋರೋನಾ ಲಾಕ್ ಡೌನ್ ಕಾಲದಲ್ಲಿ ತೀರಾ ಸಂಕಷ್ಟದಲ್ಲಿದ್ದ ಜನತೆಗೆ ಸಹಾಯ ಮಾಡಬೇಕಾಗಿದ್ದ ಸರಕಾರ ಈ ಬಜೆಟ್ ನಲ್ಲಿ ಯೋಜನೆಗಳನ್ನು ರೂಪಿಸುವ ಬದಲು ಮತ್ತೆ ದೇಶದ ಸಂಪತ್ತನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಕೈಯಾರೆ ಕೊಡುವ ರೀತಿಯಲ್ಲಿ ಬಜೆಟ್ ಮಂಡನೆ ಮಾಡಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ.ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಪ್ರಾರಂಭದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ವಾಗ್ದಾನ ನೀಡಿತ್ತು. ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗುವ ಬದಲು ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸದೆ, ಇದ್ದಿರುವ ಉದ್ಯೋಗಗಳನ್ನೇ ನಾಶಮಾಡಿ ಯುವಜನ ವಿರೋಧಿಯಾಗಿ ವರ್ತಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಮತ್ತೆ ಯುವಜನರಿಗೆ ಮಂಕುಬೂದಿ ಎರಚಲು ಹೊರಟಿದೆ ಎಂದು ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ಜಿಲ್ಲಾ ನಾಯಕ ಸುನಿಲ್ ಕುಮಾರ್ ಬಜಾಲ್ ,ಬಜೆಟ್ ಪರವಾಗಿ ತುತ್ತೂರಿ ಬಾರಿಸುವ ಬಿಜೆಪಿ ಯವರು ಜನಸಾಮಾನ್ಯರಿಗೆ ಹಾಗೂ ರೈತ ಕಾರ್ಮಿಕರಿಗೆ ಯಾವ ರೀತಿಯ ಯೋಜನೆಗಳನ್ನು ರೂಪಿಸಿದೆ ಎಂಬುದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಬಜೆಟ್ ಜನತೆಯ ಪರವಾಗಿ ಇರಬೇಕೇ ಹೊರತು ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಅಲ್ಲ. ರೈತ ಕಾರ್ಮಿಕರ ವಿದ್ಯಾರ್ಥಿ ಯುವಜನರ ಮಹಿಳೆಯರು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಣವನ್ನು ಕಡಿತ ಮಾಡುವ ಮೂಲಕ ಅಭಿವೃದ್ಧಿಯನ್ನೇ ಕುಂಠಿತಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್, ಸದಾಶಿವದಾಸ್, ಪದ್ಮಾವತಿ ಶೆಟ್ಟಿ, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪ ಕೊಂಚಾಡಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ಬಶೀರ್ ಪಂಜಿಮೊಗರು, ವಾಸುದೇವ ಉಚ್ಚಿಲ್, ಸಿಪಿಐ ಮುಖಂಡರಾದ ಬಿ.ಶೇಖರ್, ಪ್ರಭಾಕರ್ ರಾವ್, ಸುರೇಶ್ ಕುಮಾರ್, ಕರುಣಾಕರ್, ರಾಜೀವ, ಭಾಸ್ಕರ್, ಸಿಐಟಿಯು ನಾಯಕರಾದ ಯೋಗೀಶ್ ಜಪ್ಪಿನಮೊಗರು, ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಎಐಟಿಯುಸಿ ಮುಖಂಡರಾದ ಎಚ್. ವಿ. ರಾವ್, ಪ್ರವೀಣ್, ಯುವಜನ ನಾಯಕರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಜಗದೀಶ್ ಬಜಾಲ್, ಕೃಷ್ಣಪ್ಪ ವಾಮಂಜೂರು, ಜಗತ್ ಪಾಲ್, ಪುಷ್ಪಾರಾಜ್, ಹರ್ಷಿತ್, ಕೇಶವತಿ, ಮಹಿಳಾ ಮುಖಂಡರಾದ ಭಾರತಿ ಬೋಳಾರ, ನಳಿನಾಕ್ಷಿ, ವಿಲಾಸಿನಿ, ಪ್ರಮೀಳಾ ಶಕ್ತಿನಗರ, ದಲಿತ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ ಮುಂತಾದ ವರು ಉಪಸ್ಥಿತರಿದ್ದರು.