ಇತ್ತೀಚಿನ ಸುದ್ದಿ
ಪುತ್ತೂರಿನ ಉದ್ಯಮಿಗೆ ಬೆದರಿಯೊಡ್ಡಿ ಹಣ ವಸೂಲಿಗೆ ಯತ್ನ: ಇಬ್ಬರು ರೌಡಿಶೀಟರ್ ಗಳ ಬಂಧನ
15/01/2022, 18:28
ಪುತ್ತೂರು(reporterkarnataka.com): ಉದ್ಯಮಿಯೊಬ್ಬರಿಗೆ ಕರೆ ಮಾಡಿ ಬೆದರಿಕೆಯೊಡ್ಡಿ ಹಣ ವಸೂಲಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಶೀಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಲಂದರ್ ಶರೀಫ್ ಮತ್ತು ಹಸನಬ್ಬ ಎಂದು ಗುರುತಿಸಲಾಗಿದೆ. ಶರೀಫ್ ಮತ್ತು ಹಸನಬ್ಬ ಪುತ್ತೂರಿನ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಅವನನ್ನು ಬಿಡಿಸಲು 13 ಲಕ್ಷ ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು. ಎರಡು ದಿನಗಳೊಳಗೆ 3.50 ಲಕ್ಷ ರೆಡಿ ಮಾಡಬೇಕು. ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದು, ಅಷ್ಟೇ ಅಲ್ಲದೇ ಈ ವಿಷಯ ಬೇರೆ ಯಾರಿಗಾದರೂ ತಿಳಿಸಿದರೇ ನಿನ್ನ ಹೆಣ ಬೀಳುತ್ತದೆ. ನೀನು ಜೀವಂತ ಬದುಕಲು ಸಾಧ್ಯವಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿತರ ಪೈಕಿ ಕಲಂದರ್ ಶರೀಫ್ ಶಾಫಿ ಈತನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಹಸನಬ್ಬ/ಹಸನ್/ಅಚ್ಚು/ಅಚುನ್ ಈತನು ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ.
ಅಲ್ಲದೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ.ವೈ. ಅಮೀನ್ ಸಾಬ್ ಎಂ ಅತ್ತಾರ್ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ,ದೇವರಾಜ್, ಅದ್ರಾಮ, ಪ್ರವೀಣ್ ರೈ, ಹರ್ಷಿತ್, ಗಾಯತ್ರಿ, ವಿನೋದ್, ರವರು ಭಾಗವಹಿಸಿರುತ್ತಾರೆ. ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ರವರು ಸಾಥ್ ನೀಡಿರುತ್ತಾರೆ.














