ಇತ್ತೀಚಿನ ಸುದ್ದಿ
ಕನ್ನಡ ಸಾರಸ್ವತ ಲೋಕವನ್ನು ಅಗಲಿದ ಚಂಪಾ ; ಸಂತಾಪ ಸೂಚಿಸಿದ ಗಣ್ಯರು
10/01/2022, 15:31
ಬೆಂಗಳೂರು(reporterkaranataka.com): ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಕನ್ನಡದ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು “ಚಂಪಾ’ ಎಂದೇ ಪ್ರಖ್ಯಾತರಾಗಿದ್ದರು. ರಾಜ್ಯದ ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರದ ಅನೇಕ ಮುಖಂಡರು ಚಂಪಾ ಅವರ ಅಗಲಿಕೆಗೆ ಸಂತಾಪವನ್ನು ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
1939ರಲ್ಲಿ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಟಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಥಿವ ಶರೀರವನ್ನು ಬೆಂಗಳೂರಿನ ಯಲಚೇನಹಳ್ಳಿ ಸಮೀಪದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು.