ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಬದಲಾವಣೆ ಇಲ್ಲ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಸ್ಪಷ್ಟನೆ
28/12/2021, 00:08
ಬೆಂಗಳೂರು(reporterkarnataka.com):
ಕೊರೋನಾ ನಿಯಮಾವಳಿ ಹಿನ್ನೆಲೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಮಿಸಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಪ್ರವಾಸ ರದ್ದಾಗಿದೆ ಎಂದು ಹೇಳಿದಬಿಜೆಪಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಿಸ್ತಿ ಪಕ್ಷವಾಗಿದ್ದು, ರಾಜ್ಯದಲ್ಲಿ ಜಾರಿಯಲ್ಲಿರುವ ಕೊರೋನಾ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ ನಡ್ಡಾ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ಅದರಂತೆ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಬೇಕಿದ್ದ ೫೦೦ ಜನರ ಬದಲಿಗೆ ಕೇವಲ ೩೦೦ ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದರು.
ಸಿಎಂ ಬದಲಾವಣೆಯಿಲ್ಲ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಅತ್ಯಂತ ಉತ್ತಮವಾಗಿ, ಪ್ರಾಮಾಣಿಕ, ಬದ್ಧತೆ ಮತ್ತು ನಿರೀಕ್ಷೆ ಮೀರಿ ಆಡಳಿತ ನಡೆಸುತ್ತಿದ್ದಾರೆ. ಅವರ ಬಗ್ಗೆ ಇರುವ ಭ್ರಷ್ಟಾಚಾರ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದೆ. ಅವರ ಬದಲಾವಣೆ ಕೇವಲ ಊಹಾಪೋಹವಾಗಿದ್ದು, ರಾಜ್ಯದ ಸಿಎಂ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಗುತ್ತಿಗೆದಾರರ ಶೇ. ೪೦ ಕಮಿಷನ್ ಆರೋಪ ಸುಳ್ಳಾಗಿದ್ದು, ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳು ಅದರಲ್ಲಿ ಭಾಗವಹಿಸಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗ: ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವೆ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನು ಕಿತ್ತಾಟಗಳು ಹೆಚ್ಚಾಗುತ್ತವೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ತುಷ್ಟೀಕರಣ, ಜಾತಿಗಳ ನಡುವೆ ಒಡೆದಾಡುವ ರಾಜಕಾರಣ ಮಾಡಿದ್ದರು. ಇದರಿಂದ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಕೇಂದ್ರದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅವರಿಂದ ಇವರಿಗೆ ಯಾವುದೇ ಸ್ಪೂರ್ತಿ ಸಿಗುತ್ತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರೆ ಮತ ಸಿಗದು, ಬದಲಾಗಿ ಇರುವ ಮತಗಳುನ್ನೂ ಕಳೆದುಕೊಳ್ಳುತ್ತಾರೆ ಎಂದರು.
ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನದಿಂದ ಅವರೆ ಕೆಳಗಿಳಿದರು. ಹೈಕಮಾಂಡ್ ಇದಕ್ಕೆ ಕಾರಣವಲ್ಲ. ಮುಂಬರುವ ವಿಧಾನಸಭಾ ಚುನಾವಣೆ ಬೊಮ್ಮಾಯಿಯವರ ನೇತೃತ್ವದದಲ್ಲಿ ಮಾಡಲಾಗುವುದು. ಆ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಸೋಲಿನ ಕುರಿತು ಸಮಿತಿ ರಚಿಸಿ ಸಮೀಕ್ಷೆ ಮಾಡಲಾಗುತ್ತದೆ.
ಬಸವರಾಜ ಬೊಮ್ಮಾಯಿಯವರು ಕೇಂದ್ರ ಸಚಿವರಾಗುತ್ತಾರೆ ಎಂಬ ನಿರಾಣಿ ಹೇಳಿಕೆಗೆ ಅರುಣ ಸಿಂಗ್ ಪ್ರತಿಕ್ರಿಯಿಸಿ, ಈ ಕುರಿತು ಅವರ ಜೊತೆ ಮಾತನಾಡಲಾಗಿದೆ.ಅವರ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದರು.