ಇತ್ತೀಚಿನ ಸುದ್ದಿ
ಜವಾದ್ ಚಂಡಮಾರುತ: ಒಡಿಶಾ, ಆಂಧ್ರ, ಪಶ್ಚಿಮ ಬಂಗಾಳ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ; ಎಚ್ಚರಿಕೆ ಕ್ರಮ
03/12/2021, 14:56
ಹೊಸದಿಲ್ಲಿ(reporterkarnataka.com): ಅಕಾಲಿಕ ಮಳೆಯಿಂದಾಗಿ ದೇಶವೇ ತತ್ತರಿಸಿರುವ ನಡುವೆ ಮತ್ತೊಂದು ಚಂಡಮಾರುತ ಜವಾದ್ ಭಾರತಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಇಂದು ಈ ಚಂಡಮಾರುತ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿ ತಲುಪುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ ಪಶ್ಚಿಮ-ಮಧ್ಯ ಭಾಗದ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರವಾಗಿದ್ದು, ಆಳವಾದ ವಾಯುಭಾರ ಕುಸಿತವಾಗಿದೆ. ಈ ಹಿನ್ನೆಲೆ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ನಾಳೆ ಈ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಥೈಲ್ಯಾಂಡ್‌ನ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿ ಗಾಳಿ ಏಳಲಿದ್ದು, ಅದು ಚಂಡಮಾರುತದ ಸ್ವರೂಪ ಪಡೆಯಲಿದೆ. ನಂತರ ಅಂಡಮಾನ್ ಸಾಗರದ ದಕ್ಷಿಣ ಕರಾವಳಿ ಮೂಲಕ ಡಿ.4ರಂದು ಭಾರತ ಪ್ರವೇಶಿಸಲಿದ್ದು, ಇದರಿಂದ ಅತೀ ಹೆಚ್ಚು ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭೂಕುಸಿತದ ಸಾಧ್ಯತೆ ಇದೆ. ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಮತ್ತು ಬೆಳೆಗಳಿಗೆ, ಮುಖ್ಯವಾಗಿ ಭತ್ತದ ಬೆಳೆಗೆ ನಷ್ಟವಾಗುವ ಭೀತಿ ಇದೆ.
ಜವಾದ್ ಚಂಡಮಾರುತದಿಂದ ಉಂಟಾಗಲಿರುವ ಪರಿಸ್ಥಿತಿ ಎದುರಿಸಲು ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಹಾಗೂ ಸಂಬಂಧಿಸಿದ ಸಂಸ್ಥೆಗಳು ಕೈಗೊಂಡಿರುವ ಸಿದ್ಧತೆ ಕುರಿತು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.