ಇತ್ತೀಚಿನ ಸುದ್ದಿ
ಸಂಕಷ್ಟದಲ್ಲಿರುವ 18 ಮೀರಿದ ಎಲ್ಲ ಕಲಾವಿದರಿಗೆ ಸರಕಾರ ನೆರವು ನೀಡಲಿ: ನಟ, ರಂಗ ನಿರ್ದೇಶಕ ಡಿಂಗ್ರೀ ನರೇಶ್
31/05/2021, 18:13
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಕೋವಿಡ್ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರಕಾರ ಆರ್ಥಿಕ ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ. ಆದರೆ ವಯಸ್ಸಿನ ಮಿತಿ ಹೇರುವುದು ಬೇಡ. 18 ಮೀರಿದ ಎಲ್ಲ ಕಲಾವಿದರಿಗೂ ನೆರವು ಒದಗಿಸಬೇಕೆಂದು ನಟ, ನಿರ್ದೇಶಕ ಡಿಂಗ್ರೀ ನರೇಶ್ಮನವಿ ಮಾಡಿದ್ದಾರೆ.
ಕಲಾವಿದರು ಆರ್ಥಿಕ ನೆರವಿಗಾಗಿ ಅರ್ಜಿ ಹಾಕಲು ವಿಧಿಸಿರುವ ನಿಬಂಧನೆಗಳು ಅವೈಜ್ಞಾನಿಕವಾಗಿದ್ದು, ವಯಸ್ಸಿನ ಮಿತಿ 35 ವರ್ಷ ಮೀರಿರಬೇಕೆಂದು ನಿಯಮ ರೂಪಿಸಿರುವುದರಿಂದ ಈಗಾಗಲೇ ಸಂಕಷ್ಟದಲ್ಲಿರುವ ಯುವ ಕಲಾವಿದರಿಗೆ ಅನ್ಯಾಯವಾಗುತ್ತದೆ. ಯುವಕರನ್ನು ಸರಕಾರ ಕಡೆಗಣಿಸಿದಂತೆ ಬಿಂಬಿತವಾಗುತ್ತದೆ.
ಸರಕಾರ ನೀಡಲು ನಿರ್ಧರಿಸಿರುವ ಆರ್ಥಿಕ ನೆರವಿನ ಮೊತ್ತ ಅತ್ಯಲ್ಪವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಜೀವನ ನಿರ್ವಹಿಸಲು ಕಲಾವಿದರಿಗೆ ಕಷ್ಟವಾಗುತ್ತದೆ. ಹಾಗಾಗಿ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ, ಆರ್ಥಿಕ ನೆರವಿನ ಮೊತ್ತವನ್ನು ಅಧಿಕ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅರ್ಜಿ ಹಾಕಲು ಸರ್ಕಾರ ನಿಗದಿಪಡಿಸಿರುವ ಕಡೆಯ ದಿನಾಂಕದ ಗಡುವು ಅಲ್ಪಾವಧಿಯಾಗಿದ್ದು, ಗ್ರಾಮೀಣ ಭಾಗದವರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಗಡುವನ್ನು ಕನಿಷ್ಠ ಒಂದು ವಾರಕ್ಕಾದರೂ ಮುಂದೂಡಬೇಕು. ಇದು ನಮ್ಮೆಲ್ಲರ ಒಕ್ಕೊರಲಿನ ಒತ್ತಾಯವಾಗಿದ್ದು ಕೂಡಲೇ ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಯುವರಂಗ ಸಮುದಾಯ ಭವಿಷ್ಯದಲ್ಲಿ ಈ ನಿರ್ಧಾರದ ವಿರುದ್ಧ ರಾಜ್ಯವ್ಯಾಪಿ ಚಳುವಳಿ ನಡೆಸಬೇಕಾಗುತ್ತದೆಂಬ ಎಚ್ಚರಿಕೆಯನ್ನೂ ಸಹ ನೀಡಬೇಕಾಗುತ್ತದೆ ಎಂದರು.
ಈಗಾಗಲೇ ಯುವ ರಂಗಕರ್ಮಿಗಳು ಸೋಷಿಯಲ್ ಮೀಡಿಯಾ ಮೂಲಕ ಚಳುವಳಿ ಪ್ರಾರಂಭ ಮಾಡಿದ್ದಾರೆ. ದಯ ಮಾಡಿ ಈ ನಿಟ್ಟಿನಲ್ಲಿ ನೀವು ಸರಕಾರದ ಜತೆ ಮಾತಾಡಿ ಯುವಕರನ್ನು ಗಮನದಲ್ಲಿಟ್ಟುಕೊಂಡು ಅರ್ಥಿಕ ನೆರವು ನೀಡಿ ಎಂದು ರಂಗ ನಿರ್ದೇಶಕ, ಸಿನಿಮಾ ನಟ ಡಿಂಗ್ರಿ ನರೇಶ್ ಅವರು ಸಂಸದರಾದ ರಾಜ ಅಮರೇಶ್ವರ ನಾಯಕ್ ಅವರ ಗಮನಕ್ಕೂ ತಂದಿದ್ದಾರೆ. ಯುವ ಕಲಾವಿದರ ಪರವಾಗಿ ನಾನು ಒತ್ತಡ ತರುತ್ತೇನೆ ಎಂದು ಸಂಸದರು ಕೂಡ ಭರವಸೆ ನೀಡಿದ್ದಾರೆ ಎಂದು ಡಿಂಗ್ರೀ ತಿಳಿಸಿದ್ದಾರೆ.