ಇತ್ತೀಚಿನ ಸುದ್ದಿ
ಮಂಗಳೂರಿಗೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಭರವಸೆ
25/09/2021, 20:56
ಮಂಗಳೂರು(reporterkarnataka.com): ಆಯುರ್ವೇದ ಚಿಕಿತ್ಸೆಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಮಂಗಳೂರು ನಗರಕ್ಕೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಕೇಂದ್ರದ ಬಂದರು, ಜಲಸಾರಿಗೆ, ಶಿಪ್ಪಿಂಗ್ ಹಾಗೂ ಆಯುಷ್ ಸಚಿವರಾದ ಸರ್ಬಾನಂದ ಸೋನೋವಾಲ್ ಹೇಳಿದರು.
ಅವರು ಶನಿವಾರ ನಗರದ ಜಿಲ್ಲಾಸ್ಪತ್ರೆ ವೆನ್‌ಲಾಕ್ ಆವರಣದಲ್ಲಿ ಸಂಯುಕ್ತ ಆಯುಷ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕೇರಳದ ತ್ರಿಶ್ಯೂರ್‌ನಲ್ಲಿರುವಂತೆಯೇ ಮಂಗಳೂರಿಗೂ ಆಯುಷ್ ಸ್ಟೋರ್ಟ್ಸ್ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಕೇಂದ್ರದ ಸಚಿವರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಕೇಂದ್ರದ ಆಯುಷ್ ಸಚಿವರು ಭರವಸೆ ನೀಡಿದರು.
ಪ್ರಾಕೃತಿಕ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಹಾಗೂ ಅವಲಂಬನೆ ಇರುವ ಕಾರಣ ಇಲ್ಲಿನ ಜನರ ಆಶಯದಂತೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್ ಅನ್ನು ಮಂಗಳೂರಿಗೆ ಮಂಜೂರು ಮಾಡಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದ ಸಚಿವರು, ಇಂದು ಉದ್ಘಾಟನೆಯಾದ ಸಂಯುಕ್ತ ಆಯುಷ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು, ಅವರಲ್ಲಿ ವಿಶೇಷವಾದ ಪ್ರೀತಿ ತೋರಬೇಕು, ಇಂದು ಕಟ್ಟಡ ನಿರ್ಮಾಣವಾಗಿದೆ, ಕಟ್ಟಡ ಅಭಿವೃದ್ದಿ ಸಂಕೇತ, ಇಲ್ಲಿನ ವೈದ್ಯರು, ನರ್ಸ್ಗಳು, ಸಿಬ್ಬಂದಿಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಹಾಗೂ ಆಸ್ಪತ್ರೆಯನ್ನು ಸ್ಪಚ್ಚವಾಗಿಟ್ಟುಕೊಳ್ಳುವುದು ಉತ್ತಮ ಆಡಳಿತದ ಸಂಕೇತ ಎಂದರು.
ವೈದ್ಯ ವೃತ್ತಿ ಪರಮ ಪವಿತ್ರ. ಆಸ್ಪತ್ರೆ ಅಂದರೇನೆ ಅಲ್ಲಿ ಸಂತೋಷ ತುಂಬಿ ತುಳುಕಿರಬೇಕು, ಒಬ್ಬ ರೋಗಿ ಆಸ್ಪತ್ರೆಗೆ ದಾಖಲಾದರೆ, ಆಸ್ಪತ್ರೆಯಲ್ಲಿನ ಉತ್ತಮ ವಾತಾವರಣ ಅವನಲ್ಲಿ ರೋಗ ಗುಣಮುಖವಾಗುವ ಆತ್ಮವಿಶ್ವಾಸ ತುಂಬಬೇಕು, ಈ ಆಸ್ಪತ್ರೆಗೆ ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರದಿಂದ ಇನ್ನೂ ಉತ್ತಮ ನೆರವು ನೀಡಲಾಗುವುದು, ಆಯುಷ್ ಮಂತ್ರಾಲಯದ ಉದ್ದೇಶಗಳನ್ನು ಜನತೆ ತಿಳಿದುಕೊಳ್ಳುವಂತಾಗಬೇಕೆನ್ನುವುದು ನಮ್ಮ ಇಚ್ಛೆಯಾಗಿದೆ ಎಂದು ಸಚಿವರು ಹೇಳಿದರು.
ನದಿ, ಸಮುದ್ರ, ಯೋಗ್ಯ ಕೃಷಿ ಭೂಮಿ ಇರುವ ಕರ್ನಾಟಕ ಸಂಪದ್ಬರಿತ ರಾಜ್ಯ. ಸಾಕ್ಷಾತ್ ಭಗವಂತನೇ ತನ್ನ ಕೈಯಿಂದ ಈ ರಾಜ್ಯವನ್ನು ಸೃಷ್ಟಿಸಿದಂತಿದೆ, ಅದರಲ್ಲೂ ಮಂಗಳೂರು, ಇಲ್ಲಿನ ಜನರ ಪ್ರೀತಿ ಅತ್ಯಂತ ಆಪ್ಯಾಯಮಾನವಾಗಿದೆ, ಇಲ್ಲಿ ಕಲಿಯುವುದು ಸಾಕಷ್ಟಿದೆ, ಮತ್ತೋಮ್ಮೆ ಇಲ್ಲಿಗೆ ಬರಲು ಮನಸ್ಸು ಪ್ರೇರೇಪಿಸುತ್ತಿದೆ ಎಂದು ಸಚಿವರು ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಸುಮಾರು ೯ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಯುಕ್ತ ಆಯುಷ್ ಆಸ್ಪತ್ರೆಯು ಕೇಂದ್ರದ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ೨೦೧೬ ರಲ್ಲಿ ವೆನ್ ಲಾಕ್ ಆಸ್ಪತ್ರೆ ಆವರಣದಲ್ಲಿ ೫ ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಮಂಜೂರಾಗಿ ೨೦೨೦ರಲ್ಲಿ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕೋವಿಡ್ ಸಾಂಕ್ರಮಿಕದಿಂದಾಗಿ ಆಸ್ಪತ್ರೆ ಉದ್ಘಾಟನೆ ಮಾಡಲು ಸಾಧ್ಯವಾಗಿರಲಿಲ್ಲ, ಕೋವಿಡ್ ಮಾನದಂಡಗಳನ್ನು ಪಾಲಿಸಿ ಈಗ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದರು.
ಹೊರರೋಗಿ ವಿಭಾಗವು ಇಂದಿನಿಂದ ಕಾರ್ಯಾರಂಭವಾಗುತ್ತಿದ್ದು, ಆಯುಷ್‌ನ ಎಲ್ಲಾ ಪದ್ಧತಿಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿಗಳ ವಿಶೇಷ ಚಿಕಿತ್ಸಾ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ. ಎಲ್ಲಾ ಆಯುಷ್ ಪದ್ಧತಿಗಳು ಹಾಗೂ ಆರೋಪತಿ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿರುವ ದೇಶದ ಮೊತ್ತಮೊದಲ ಆಸ್ಪತ್ರೆ ಇದಾಗಿದೆ ಎಂದು ಹೇಳಿದರು.
ಈ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪಂಚಕರ್ಮ, ಜಪ, ಕಾರಸವ ಅಭ್ಯಂಗ ಮುಂತಾದ ಎಲ್ಲಾ ಚಿಕಿತ್ಸೆ ಲಭಿಸಲಿದೆ, ನ್ಯಾಚುರೋಪತಿ ಪದ್ಧತಿಯ ಜಲಚಿಕಿತ್ಸೆ, ಆಕ್ಯೂಪಂಚರ್, ಆಕ್ಯುಪ್ರೆಶರ್, ಕಲರ್‌ಥೆರಪಿ ಪಿಸಿಯೋಥೆರಪಿ ಮುಂತಾದ ಚಿಕಿತ್ಸೆಗಳು ಹಾಗೂ ಯುನಾನಿ ಚಿಕಿತ್ಸಾ ಪದ್ಧತಿಯಲ್ಲಿ ಫಲಕ, ಹಿಜಾಮ (ಗಜೆಮಿನಲ್ ಥೆರಪಿ) ಮುಂತಾದ ಆಯುಷ್ ಚಿಕಿತ್ಸಾ ಪದ್ದತಿ ಇಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಎನ್‌ಎಂಪಿಟಿ ಅಧ್ಯಕ್ಷ ರಮಣ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತೀನ್ ಕುಮಾರ್, ದಿ ಮೈಸೂರು ಎಲೆಕ್ಟಿçಕಲ್ಸ್ ಇಂಡಸ್ಟಿಸ್ ಲಿಮಿಟೆಡ್‌ನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರ
ಚಿಕಿತ್ಸಕ ಡಾ. ಸದಾಶಿವ ಶ್ಯಾನ್‌ಬೋಗ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಆಯುಷ್ ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸಚಿವರನ್ನು ಸನ್ಮಾನಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಮಹಮದ್ ಇಕ್ಬಾಲ್ ಸ್ವಾಗತಿಸಿದರು. ಶೋಭಾರಾಣಿ ವಂದಿಸಿದರು.