ಇತ್ತೀಚಿನ ಸುದ್ದಿ
ಕೂಡ್ಲಿಗಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
25/09/2021, 10:00
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಎಐಟಿಯುಸಿ ಮುಖಂಡ ಎಚ್.ವೀರಣ್ಣ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಫೆಡರೇಷನ್ ಕಾರ್ತಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೂಡ್ಲಗಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು ತಹಶೀಲ್ದಾರರ ಮುಖಾಂತರ ಪ್ರಧಾನಿಗೆ ಹಕ್ಕೊತ್ತಾಯ ಪತ್ರ ನೀಡಿದರು.
ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಬಿಸಿಯೂಟ ಫೆಡರೇಶನ್ ಕಾರ್ಯಕರ್ತರು ಮತ್ತು ವಿಮುಕ್ತ ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು. ಪ್ರತಿಭಟನೆ ಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ.
ಕನಿಷ್ಠ ವೇತನ 20 ಸಾವಿರ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಕೂಡ್ಲಿಗಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಮತ್ತು ಸಹಾಯಕಿರ ಫೆಡರೇಶನ್ ಎಐಟಿಯುಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು, ಕೂಡ್ಲಿಗಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು, ನಂತರ ತಹಶೀಲ್ದಾರ್ ಟಿ. ಜಗದೀಶರಿಗೆ ಹಕ್ಕೊತ್ತಾಯ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ಪದಾಧಿಕಾರಿಗಳಾದ ಕೆ.ಪದ್ಮಾ, ಅಂಗನವಾಡಿ ಸಂಘಟನೆ ಮುಖಂಡರಾದ ಗಜಾಪುರದ ಕೆ. ರೇಣುಕಮ್ಮ, ದೇವದಾಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗಜಾಪುರ ವಿಠಲ್, ಅಖಿಲ ಭಾರತ ಯುವಜನ ಫೆಡರೇಷನ್ ಖಜಾಂಚಿ ಟ್ಯಾಂಕಿ ತಿಪ್ಪೇಸ್ವಾಮಿ, ಸಿಪಿಐ ಸಹ ಕಾರ್ಯದರ್ಶಿ ಮಹಿಳಾ ಮುಖಂಡರಾದ ಬಿ.ರೇಣುಕಮ್ಮ, ಕೊಟ್ಟೂರಿನ ದೇವದಾಸಿ ಸಂಘಟನೆ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬೇಡಿಕೆಗಳು:
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ವೇತನ ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಪ್ರಚಾರ ಪಡೆದುಕೊಂಡಿದ್ದವು. ಆದರೆ ಒಮ್ಮೆಯೂ ನಿಗದಿತ ಸಮಯಕ್ಕೆ ಗೌರವ ಧನ ನೀಡಿಲ್ಲ. ಬೇಸಿಗೆ ರಜೆಯ ಅವಧಿಯನ್ನು ಒಂದು ತಿಂಗಳಿಗೆ ಹೆಚ್ಚಿಸಬೇಕು.
ರಾಜ್ಯದಾದ್ಯಂತ 80 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 1.20 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಈವರೆಗೆ ಗೌರವಧನ ಮಾತ್ರ ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿದಂತೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ 21 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು.