ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ರಿವರ್ಸ್ ಆಪರೇಶನ್ ?: ಬಿಜೆಪಿ, ದಳ ಶಾಸಕರು ಕಾಂಗ್ರೆಸ್ ಗೆ?; ಹಾಗಾದರೆ ಯಾರೆಲ್ಲ ಕೈ ಪಾಳಯ ಸೇರಲಿದ್ದಾರೆ?
24/09/2021, 10:05
ರಾಜೇಶ್ವರಿ ನೆಲಮಂಗಲ ಬೆಂಗಳೂರು
info.reporterkarnataka@gmail.com
ಬೆಂಗಳೂರು(reporterkarnataka.com)
ಆಪರೇಶನ್ ಕಮಲದ ಮೂಲಕ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಮಲವನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಿವರ್ಸ್ ಆಪರೇಶನ್ ಮಾಡಲು ತಂತ್ರ ರೂಪಿಸಿದೆ. 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗೂ ಜನತಾ ದಳದ ಶಾಸಕರನ್ನು ತನ್ನತ್ತ ಸೆಳೆಯಲು ವೇದಿಕೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಹಾಗಾದರೆ ಹಾಲಿ ಶಾಸಕರಲ್ಲಿ ಯಾರೆಲ್ಲ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎನ್ನುವುದನ್ನು ನೋಡೋಣ ಬನ್ನಿ.
ರಾಜ್ಯದಲ್ಲಿ ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ನಿಂದಲೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಎಸ್. ಬಂಗಾರಪ್ಪ ಅವರ ಪುತ್ರ ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ ಮತ್ತು ಕುಮಾರ್ ಬಂಗಾರಪ್ಪ ಅವರು ಕೂಡ ಕೈ ಪಾಳಯ ಸೇರಲು ಉತ್ಸುಕರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕುಮಾರ್ ಬಂಗಾರಪ್ಪ ಅವರನ್ನು ಮತ್ತೆ ಕಾಂಗ್ರೆಸ್ ಗೆ ಸೆಳೆಯುವ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ಬಂಗಾರಪ್ಪ ಅವರ ಇನ್ನೊರ್ವ ಪುತ್ರ ಮಧು ಬಂಗಾರಪ್ಪ ಅವರು ಈಗಾಗಲೇ ಜನತಾ ದಳ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಆದರೆ ಉತ್ತರ ಧ್ರುವ, ದಕ್ಷಿಣ ಧ್ರುವ ತರಹ ಇರುವ ಅಣ್ಣ- ತಮ್ಮಂದಿರು ಒಂದೇ ಪಕ್ಷದಲ್ಲಿರುವುದು ಕಷ್ಟ ಸಾಧ್ಯ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪದರಲ್ಲಿ
ಅಧಿಕಾರ ಕಳೆದುಕೊಂಡ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಶತಾಯಗತಾಯ ಪ್ರಯತ್ನದಲ್ಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅದಕ್ಕಾಗಿ ಮತ್ತೆ ಗೆಲ್ಲಬಹುದಾದ ಕಾಂಗ್ರೆಸ್ ಮತ್ತು ಜನತಾದಳದ ಶಾಸಕರನ್ನು ಕಾಂಗ್ರೆಸ್ ಗೆ ಕರೆದು ತರುವ ಕುರಿತು ಭಾರಿ ಪ್ರಯತ್ನಗಳು ನಡೆಯುತ್ತಿದೆ. ಕಾಂಗ್ರೆಸ್ ಸೇರುವ ಪಟ್ಟಿಯಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ದೇವದುರ್ಗ ಶಾಸಕ ಶಿವನಗೌಡ ನಾಯಕ, ಗುಬ್ಬಿ ಶಾಸಕ ವಾಸು, ಗ್ರಾಮಾಂತರ ಶಾಸಕ ಗೌರಿ ಶಂಕರ್ ಅವರ ಹೆಸರಿದೆ. ಇದರ ಜತೆಗೆ ಜನತಾ ದಳದಿಂದ ಜಿ.ಟಿ. ದೇವೇಗೌಡ ಅವರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.
ಬೊಮ್ಮಾಯಿ ಸಚಿವ ಸಂಪುಟ ಸೇರಬೇಕಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿ ಆ ಸ್ಥಾನವನ್ನು ಶಶಿಕಲಾ ಜೊಲ್ಲೆ ಅಲಂಕರಿಸಿದರು.
ಕಾಂಗ್ರೆಸ್ ಹಿರಿಯ ನಾಯಕರಾದ ದಿ.ಕೃಷ್ಣಪ್ಪನವರ ಪುತ್ರಿಯಾಗಿರುವ ಪೂರ್ಣಿಮಾ ಅವರಲ್ಲಿ ಭುಗಿಲೆದ್ದ ಅಸಮಾಧಾನ ಮುಂದಿನ ಚುನಾವಣೆಯಲ್ಲಿ ಪಕ್ಷ ಬದಲಾಯಿಸುವ ಹಂತಕ್ಕೆ ತಲುಪಲಿದೆ ಎನ್ನಲಾಗಿದೆ.
ಬಿಜೆಪಿಯ ಬಹುತೇಕ ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದ್ದರೆ, ಜೆಡಿಎಸ್ ಶಾಸಕರಿಗೆ ತಾವು ಮೂಲೆಗುಂಪಾಗಿರುವ ಕುರಿತು ಚಿಂತೆ ಕಾಡಲಾರಂಭಿಸಿದೆ. ಇದನ್ನೇ ಕಾಂಗ್ರೆಸ್ ಬಂಡವಾಳ ಮಾಡಿಕೊಳ್ಳಲಿದೆ.