ಇತ್ತೀಚಿನ ಸುದ್ದಿ
ಮುಂಬೈನಲ್ಲಿ ಘೋರ ದುರಂತ: ಭಾರೀ ಮಳೆಗೆ ಗುಡ್ಡ ಕುಸಿತ; 8 ಮಂದಿ ಜೀವಂತ ಸಮಾಧಿ; ಎನ್ಡಿಆರ್ಎಫ್ ಕಾರ್ಯಾಚರಣೆ
12/08/2026, 18:29
ಮುಂಬೈ(reporterkarnataka.com): ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಸಂಭವಿಸಿದ ಭೀಕರ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, ಹಲವರು ಮಣ್ಣಿನಡಿ ಸಿಲುಕಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ಕುರ್ಲಾ ವೆಸ್ಟ್ನ ಚಿರಾಗ್ ನಗರ, ಗೌಶಿಯಾ ಚಾಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸುಮಾರು 3:48ಕ್ಕೆ ಏಕಾಏಕಿ ಗುಡ್ಡ ಕುಸಿದಿದೆ. ಈ ವೇಳೆ ಎರಡು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಅವಶೇಷಗಳಡಿ ಸಿಲುಕಿ 8 ಮಂದಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಎನ್ಡಿಆರ್ಎಫ್ (NDRF), ಪೊಲೀಸರು ಹಾಗೂ ಬಿಎಂಸಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವಶೇಷಗಳಡಿ ಇನ್ನೂ 6ರಿಂದ 8 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಜೆಸಿಬಿಗಳು ಹಾಗೂ ವಿಶೇಷ ರಕ್ಷಣಾ ಉಪಕರಣಗಳನ್ನು ಬಳಸಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಗಂಭೀರವಾಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯಕಾರಿಯಾಗಿರುವ ಮನೆಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.











