ಇತ್ತೀಚಿನ ಸುದ್ದಿ
ಕೆರೆಯಲ್ಲಿ ಸಿಲುಕಿಕೊಂಡು ಕಾಡಾನೆ ಮರಿ ಪರದಾಟ: 2 ದಿನ ಕಳೆದರೂ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ; ಸಾರ್ವಜನಿಕರ ಆಕ್ರೋಶ
08/07/2026, 20:30
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯ ದೇವರಪುರ ಗ್ರಾಮದ ಕನ್ನಬಾಡಿ ಎಂಬಲ್ಲಿ ಕಳೆದೆರಡು ದಿನಗಳಿಂದ ಆನೆ ಮರಿಯೊಂದು ಸ್ಥಳೀಯ ಕೆರೆಯೊಂದರಲ್ಲಿ ಸಿಲುಕಿಕೊಂಡಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಕಾಡಿನಿಂದ ನಾಡಿಗೆ ಬಂದಿದ್ದ ಈ ಆನೆ ಮರಿ, ಪ್ರಸ್ತುತ ಕೆರೆಯ ನೀರಿನಲ್ಲೇ ನಿಂತಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.
*ನಡೆದಿದ್ದೇನು?*
ಸ್ಥಳೀಯ ಮೂಲಗಳ ಪ್ರಕಾರ, ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡಿನಿಂದ ಬಂದಿದ್ದ ಆನೆಗಳ ಹಿಂಡಿನಲ್ಲಿದ್ದ ಈ ಮರಿ ಆಕಸ್ಮಿಕವಾಗಿ ಕನ್ನಬಾಡಿ ಗ್ರಾಮದ ಕೆರೆಗೆ ಇಳಿದಿದೆ. ಕೆರೆಯ ಆಳ ಹಾಗೂ ಕೆಸರಿನ ಕಾರಣದಿಂದಾಗಿ ಅಥವಾ ಹಿಂಡಿನಿಂದ ಬೇರ್ಪಟ್ಟ ಆತಂಕದಿಂದಾಗಿ ಆನೆ ಮರಿಯು ಕಳೆದ ಎರಡು ದಿನಗಳಿಂದ ಕೆರೆಯಿಂದ ಹೊರಬರಲಾಗದೆ ನೀರಿನಲ್ಲೇ ಕಾಲ ಕಳೆಯುತ್ತಿದೆ.
ಕಾಡಾನೆಗಳ ಹಿಂಡು ಸದ್ಯ ಈ ಭಾಗದ ಆಸುಪಾಸಿನಲ್ಲೇ ಇರಬಹುದು ಎಂದು ಶಂಕಿಸಲಾಗಿದ್ದು, ಮರಿಯು ಭಯದಿಂದ ಕೆರೆಯ ಮಧ್ಯದಲ್ಲೇ ಆಶ್ರಯ ಪಡೆದಿದೆ ಎನ್ನಲಾಗಿದೆ. ದಿನವಿಡೀ ನೀರಿನಲ್ಲೇ ಇರುವುದರಿಂದ ಆನೆ ಮರಿಯ ಆರೋಗ್ಯದ ಬಗ್ಗೆಯೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.












