ಇತ್ತೀಚಿನ ಸುದ್ದಿ
ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ ಭಗ್ನ
06/07/2026, 18:05
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಆನೆ, ಕ್ಯಾಪ್ಟನ್ ಅಭಿಮನ್ಯು ದಂತ ಭಗ್ನಗೊಂಡಿರುವ ಘಟನೆ ನಡೆದಿದೆ.
ಸರಗೂರು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಭಿಮನ್ಯು, ಕ್ಯಾಂಪ್‌ನಲ್ಲಿ ಮರದ ದಿಮ್ಮಿ ಸಾಗಿಸುವ ವೇಳೆ ಕಠಿಣ ವಸ್ತುವಿಗೆ ದಂತ ಬಡಿದಿದೆ. ಪರಿಣಾಮ ಎಡಭಾಗದ ದಂತದ ತುದಿ ಮುರಿದಿದೆ. ಘಟನೆಯ ಬಳಿಕ ಪಶು ವೈದ್ಯರು ಅಭಿಮನ್ಯುವಿನ ದಂತ ಪರಿಶೀಲಿಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಆರೋಗ್ಯವಾಗಿದ್ದು, ಎಂದಿನಂತೆ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಅಂಬಾರಿ ಆನೆ ಅಭಿಮನ್ಯುವಿನ ದಂತದ ತುದಿ ಮುರಿದಿದ್ದರೂ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಸದ್ಯದ ಸಮಾಧಾನಕರ ವಿಷಯವಾಗಿದೆ.
ಈ ವರ್ಷ ಅಂಬಾರಿ ಹೊತ್ತರೆ, ʻಅಭಿಮನ್ಯು ಯುಗʼ ಅಂತ್ಯವಾಗುತ್ತದೆ ಎಂಬುದು ಗಮನಾರ್ಹ. ಮುಂದಿನ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿ ಮಹೇಂದ್ರ ಅಥವಾ ಧನಂಜಯನ ಹೆಗಲ ಮೇಲೆ ಬೀಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.












