ಇತ್ತೀಚಿನ ಸುದ್ದಿ
ಮೈಸೂರಿನಲ್ಲಿ ದೇವಾಲಯಗಳ ತೆರವು ಕುರಿತು ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ ; ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ರಾಮದಾಸ್ ಹೇಳಿದ್ದೇನು ಗೊತ್ತಾ.?
12/09/2021, 22:23
ಮೈಸೂರು(Reporterkarnataka.com)
ಮೈಸೂರು ಜಿಲ್ಲೆಯಾದ್ಯಂತ ಹಿಂದೂ ದೇವಾಲಯಗಳ ತೆರವು ವಿಚಾರದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ನಂಜನಗೂಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕಾರ್ಯವನ್ನು ವಿರೋಧಿಸಿದರೆ ಶಾಸಕ ಎ.ರಾಮ್‌ದಾಸ್ ಜಿಲ್ಲಾಡಳಿತವನ್ನು ಡಿಫೆಂಡ್ ಮಾಡುತ್ತಿದ್ದಾರೆ.
ನಂಜನಗೂಡಿನಲ್ಲಿ ಪತ್ರಿಕಾಗೋಷ್ಠಿ ಕರೆಸಿ ಮಾತಾನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ 90ಕ್ಕಿಂತ ಅಧಿಕ ದೇವಾಲಯಗಳಿವೆ. ಅವುಗಳನ್ನು ಕೆಡವುದರಿಂದ ಜನರ ಭಾವನೆಗೆ ಧಕ್ಕೆಯಾಗುತ್ತದೆ. ಕೆಡಿಪಿ ಸಭೆಯಲ್ಲಿ ನಾನು ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ನಮ್ಮ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡ್ತಿರಾ?, ದರ್ಗಾ, ಚರ್ಚ್‌ಗಳು ಯಾಕೆ ತೆರವು ಮಾಡಿಲ್ಲ” ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ದೇವಾಲಯಗಳ ಪಟ್ಟಿ ಪರೀಲನೆ ಮಾಡಬೇಕು. 2010ರ ರಾಜ್ಯ ಸರ್ಕಾರದ ಆದೇಶವನ್ನು ತಕ್ಷಣ ವಾಪಸ್ ಪಡೆದು ಮತ್ತೊಮ್ಮೆ ಸುಪ್ರೀಂಕೋರ್ಟ್ ಮುಂದೆ ಪರಿಷ್ಕೃತ ಪಟ್ಟಿ ಸಲ್ಲಿಸಬೇಕು. ಸಾರ್ವಜನಿಕವಾಗಿ ತೊಂದರೆಯಾಗುವ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳನ್ನು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸಿ. ಸ್ಥಳೀಯರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ. ಇಲ್ಲವಾದರೆ ರಾಜ್ಯಾದ್ಯಂತ ದೇವಾಲಯಗಳನ್ನು ಉಳಿಸಿ ಎಂಬ ಅಭಿಯಾನ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿಯಲ್ಲೇ ಈ ಕುರಿತು ಭಿನ್ನಾಭಿಪ್ರಾಯ ಹುಟ್ಟಿಕೊಂಡಿದ್ದು, ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್.ಎ.ರಾಮದಾಸ್, ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಸುಪ್ರೀಂಕೋರ್ಟ್ ಸೂಚನೆಯಂತೆ ಕ್ರಮ ಜರುಗುತ್ತಿದೆ” ಎಂದು ಹೇಳಿದ್ದಾರೆ.
“ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡಲಾಗುತ್ತಿಲ್ಲ, ಮೊದಲು ಉಳಿಸಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಇದೆ. ಇದೆರಡೂ ಸಾಧ್ಯವಾಗದೆ ಇದ್ದಾಗ ತೆರವು ಮಾಡಲಾಗುತ್ತಿದೆ. ಇದರಲ್ಲಿ ಆ ಧರ್ಮದ್ದು ಈ ಧರ್ಮದ್ದು ಎಂಬುದು ಏನು ಇಲ್ಲ ಎಂದು ಹೇಳಿದ್ದಾರೆ.