ಇತ್ತೀಚಿನ ಸುದ್ದಿ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ: ಭಿತ್ತಿಚಿತ್ರ ರಚನೆ ಸ್ಪರ್ಧೆ
10/09/2021, 16:45
ಮಂಗಳೂರು(reporterkarnatakanews): ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಾಗೂ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ನೇತೃತ್ವದಲ್ಲಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯುವ ದಿನಾಚರಣೆ- 2021 ನ್ನು ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲರಾದ ಡಾ. ಅನುಸೂಯ ರೈ ಮಾತನಾಡಿ, ಕೊವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿರುವ ಮಿತಿಯೊಳಗೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಅವರಲ್ಲಿನ ಕ್ರಿಯಾಶೀಲತೆಯನ್ನು ಜೀವಂತವಾಗಿರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅತಿಥಿ ಉಪನ್ಯಾಸ ನೀಡಿದ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಸ್ವಯಂಸೇವೆ ಜನರೊಂದಿಗೆ ಬೆರೆತು ನಾಯಕತ್ವ ಗುಣ, ಸಂವಹನ ಕಲೆ ರೂಢಿಸಿಕೊಳ್ಳಲು ಇರುವ ಅವಕಾಶ. ಉತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶವಿದೆ. ದಕ್ಷಿಣ ಕನ್ನಡದ ನಾಲ್ವರು ಸ್ವಯಂಸೇವಕರು ವಿಶ್ವಸಂಸ್ಥೆಗಾಗಿ ದುಡಿಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್ . ಯುವಜನತೆ ಹಾದಿ ತಪ್ಪದೆ ಇರುವ ಅಪಾರ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಭಿತ್ತಿಚಿತ್ರ ರಚನೆ ಸ್ಪರ್ಧೆಯಲ್ಲಿ ರೋಶನಿ ನಿಲಯ ಕಾಲೇಜಿನ ನವ್ಯಾ ವಿ. ಆರ್. ಪ್ರಥಮ ಬಹುಮಾನ ಪಡೆದುಕೊಂಡರೆ, ಎಸ್. ಡಿ. ಎಂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ಪಂಚಮಿ ಕೆ ಮತ್ತು ಚೈತನ್ಯ ಎಸ್. ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದುಕೊಂಡರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಕಾರ್ಯಕ್ರಮದ ನೇತೃತ್ವ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ. ಗಾಯತ್ರಿ ಎನ್ ವಂದಿಸಿದರು. ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಮಹೇಶ್ ನಿರೂಪಿಸಿದರು.