ಇತ್ತೀಚಿನ ಸುದ್ದಿ
ಪ್ರಜಾಪ್ರಭುತ್ವ ಅಂದ್ರೆ ಕೇವಲ ಚುನಾವಣೆಗಳನ್ನು ನಡೆಸುವುದಷ್ಟೇ ಅಲ್ಲ: ಸ್ಪೀಕರ್ ಖಾದರ್
21/01/2026, 14:00
ಲಕ್ನೋ(reporterkarnataka.com): ಪ್ರಜಾಪ್ರಭುತ್ವ ಅಂದರೆ ಸಮಯಕ್ಕೆ ಸರಿಯಾಗಿ ಕೇವಲ ಚುನಾವಣೆಗಳನ್ನು ನಡೆಸುವುದಷ್ಟೇ ಅಲ್ಲ. ಚುನಾವಣೆಯ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ಪ್ರಾಮಾಣಿಕತೆ, ಬದ್ಧತೆ ಮತ್ತು ಜನಪರ ಕಾಳಜಿಯೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಆಶಯಗಳನ್ನು ಪ್ರತಿಬಿಂಬಿಸುವ ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿರುವುದೇ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವ ಮೂಲ ಆಧಾರವಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸ್ಪೀಕರ್‌ಗಳ ಅಧಿಕಾರ, ಶಾಸನಗಳನ್ನು ರೂಪಿಸಿ ಅವನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳಿಗೆ ಪರಿಹಾರಗಳ ಬಗ್ಗೆ ಇಂದು ಉತ್ತರ ಪ್ರದೇಶದ ವಿಧಾನ ಮಂಡಲದಲ್ಲಿ ನಡೆದ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿದರು.
ವಿಧಾನ ಮಂಡಲವು ಪ್ರಜಾಪ್ರಭುತ್ವದ ಹೃದಯವಾಗಿದ್ದು, ಶಾಸಕರು ಮತ್ತು ಜನಪ್ರತಿನಿಧಿಗಳು ಅದರ ಪ್ರಮುಖ ಅಂಗಗಳಾಗಿದ್ದಾರೆ. ಜನರ ಆಶಯಗಳನ್ನು ಧ್ವನಿಯಾಗಿ ಪರಿವರ್ತಿಸಿ, ಸಮಾಜಕ್ಕೆ ಅಗತ್ಯವಾದ ಕಾನೂನುಗಳನ್ನು ರೂಪಿಸುವ ಮಹತ್ತರ ಹೊಣೆಗಾರಿಕೆ ಇವರ ಮೇಲಿದೆ. ಆದ್ದರಿಂದ, ಶಾಸಕರ ಹಾಗೂ ಜನಪ್ರತಿನಿಧಿಗಳ ಸಾಮರ್ಥ್ಯವರ್ಧನೆ ಇಂದಿನ ತುರ್ತು ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ನಡೆಯುತ್ತಿರುವ ಚರ್ಚೆಗಳು ಅತ್ಯಂತ ಸ್ವಾಗತಾರ್ಹ ಹಾಗೂ ಸಂತೋಷಕರ ಸಂಗತಿಯಾಗಿವೆ ಎಂದರು.
ಓರ್ವ ಜನಪ್ರತಿನಿಧಿಯ ಕರ್ತವ್ಯವು ಕೇವಲ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಮಾತ್ರ ಸೀಮಿತವಾಗಿರದೆ, ವಿಧಾನಸಭೆಯ ಅಧಿವೇಶನಗಳು ಹಾಗೂ ಕಾನೂನು ರೂಪಣೆಗೆ ಸಂಬಂಧಿಸಿದ ಮಹತ್ವದ ಸಭೆಗಳಲ್ಲಿ ಸಮಾಜದ ವಿವಿಧ ವರ್ಗಗಳ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಜವಾಬ್ದಾರಿಯನ್ನೂ ಒಳಗೊಂಡಿರುತ್ತದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಾದ ಜ್ಞಾನ, ಅಧ್ಯಯನ ಮತ್ತು ಸಮಗ್ರ ಮಾಹಿತಿಯನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಆದ್ದರಿಂದ, ಜನಪ್ರತಿನಿಧಿಗಳಿಗೆ ಕಾಲಕಾಲಕ್ಕೆ ಮಾಹಿತಿಯನ್ನೊಳಗೊಂಡ ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅತ್ಯಂತ ಉಪಯುಕ್ತವಾಗಿದೆ ಎಂದರು.
ಒಬ್ಬ ವ್ಯಕ್ತಿ ಶಾಸಕನಾಗುವ ಮೊದಲು ಅಧಿವೇಶನಗಳನ್ನು ವೀಕ್ಷಿಸಿ, “ನಾನೂ ಜನಪ್ರತಿನಿಧಿಯಾಗಿ ಭಾಗವಹಿಸಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು” ಎಂಬ ಆಸೆ ಹೊಂದಿರುವುದು ಸಾಮಾನ್ಯ. ಆದರೆ, ಶಾಸಕನಾದ ನಂತರ ಅಧಿವೇಶನಗಳಲ್ಲಿ ಭಾಗವಹಿಸಲು ಅನಾಸಕ್ತಿ ತೋರಿಸುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಈ ಕುರಿತು ಶಾಸಕರು ಅಧಿವೇಶನಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ರಾಷ್ಟ್ರಮಟ್ಟದಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂಬ ವಿಚಾರದ ಮೇಲೂ ಚರ್ಚೆ ನಡೆಯಬೇಕು ಎಂದು ಖಾದರ್ ನುಡಿದರು.
ಸಾರ್ವಜನಿಕ ಟೀಕೆ-ಟಿಪ್ಪಣಿಗಳು ಎಷ್ಟೇ ಇದ್ದರೂ, ಜನಪ್ರತಿನಿಧಿಗಳು ಮತ್ತು ಶಾಸಕರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಪೀಕರ್‌ಗಳು ಸಕ್ರಿಯವಾಗಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಶಾಸಕರಿಗೆ ಅಗತ್ಯವಿರುವ ಕೆಲವು ಪ್ರಮುಖ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ.












