ಇತ್ತೀಚಿನ ಸುದ್ದಿ
110 ವರ್ಷಗಳ ಹಿಂದೆ ಮಂಗಳೂರು ರಥಬೀದಿಯ ವೆಂಕಟರಮಣ ದೇಗುಲದಲ್ಲಿ ಏನಿತ್ತು ವಿಶೇಷ?: ಬನ್ನಿ, ಆ ಹಳೆಯ ನೋಟಿಸ್ ಓದೋಣ !
09/06/2021, 15:48
ಮಂಗಳೂರು(reporterkarnataka news): ಇದು ಅಪರೂಪದಲ್ಲಿ ಅತೀ ಅಪರೂಪ, ವಿರಳದಲ್ಲಿ ಅತೀ ವಿರಳ ಎಂದೇ ಹೇಳಬಹುದು. ಶತಮಾನ ಹಿಂದಿನ, ಬ್ರಿಟಿಷ್ ಸಾಮ್ರಾಜ್ಯ ಕಾಲದ ನೋಟಿಸ್ ಇದು. ಹಾಗೆಂತ ಜನಪದ ಕಲೆಯಾದ ಯಕ್ಷಗಾನ, ಕಂಬಳದ ನೋಟಿಸ್ ಅಲ್ಲ. ಬದಲಿಗೆ ಮಂಗಳೂರಿನ ರಥಬೀದಿಯಲ್ಲಿರುವ ಐತಿಹಾಸಿಕ ಶ್ರೀ ವೆಂಕಟರಮಣ ದೇವಾಲಯಕ್ಕೆ ಸಂಬಂಧಿಸಿದ ನೋಟಿಸ್ (ಆಮಂತ್ರಣ ಪತ್ರಿಕೆ). ಬಹಳ ಶ್ರದ್ಧೆಯಿಂದಲೇ ಇದನ್ನು ಕಾಪಾಡಿಕೊಂಡು ಬರಲಾಗಿದೆ.
ಅದು ಬ್ರಿಟಿಷ್ ಸಾಮ್ರಾಜ್ಯದ ಕಾಲ. 5ನೇ ಜಾರ್ಜರ ಆಳ್ವಿಕೆಯ ಅವಧಿ. 1911ನೇ ಇಸವಿ. ಅಂದ್ರೆ ಸುಮಾರು 110 ವರ್ಷಗಳ ಹಿನ್ನೋಟವನ್ನು ಇದು ನಮ್ಮೆಲ್ಲರ ಮನ ತುಂಬಿಸುತ್ತದೆ, ಹೃದಯವನ್ನು ನವಿರಾಗಿ ತಟ್ಟುತ್ತದೆ.
ಬ್ರಿಟಿಷ್ ದೊರೆ 5ನೇ ಜಾರ್ಜ್ ಹಾಗೂ ಮಹಾರಾಣಿ ಮೇರಿ ಅವರ ಪಟ್ಟಾಭಿಷೇಕದ ಸಂಭ್ರಮವನ್ನು ಸಾಕ್ಷಾತ್ಕರಿಸುವ ಕಾಲವಾಗಿತ್ತು. ಇದರ ಅಂಗವಾಗಿ ರಥಬೀದಿ(ಅಂದಿನ ತೇರಬೀದಿ)ಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆಯ ವಿವರ ನೋಟಿಸ್ ಎಂಬ ಈ ಆಮಂತ್ರಣ ಪತ್ರಿಕೆಯಲ್ಲಿ ಲಭ್ಯವಿದೆ. 1911 ಡಿಸೆಂಬರ್ 12ನೇ ಮಂಗಳವಾರದಂದು ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ ನಡೆದಿತ್ತು ಎನ್ನುವುದನ್ನು ಇದು ಸಾದರಪಡಿಸುತ್ತದೆ. ಅಂದು ದೇವಳದ ಮೊಕ್ತೇಸರರಾಗಿ ಸಾವಕಾರ ಪಾಂಡುರಂಗ ಪೈ, ಸಾವಕಾರ ರಂಗ ಪೈ ಹಾಗೂ ನಗರ ಗಣಪತಿ ರಾವ್ ಸೇವೆ ಸಲ್ಲಿಸಿದ್ದರು. ದೇಗುಲದ ಆಡಳಿತ ಮಂಡಳಿಯ ಸದಸ್ಯರಾಗಿ ಎಂ. ನಾಗಪ್ಪ ಭಂಡಾರಿ, ಬಿ. ನಾರಾಯಣಪ್ಪ ಹಾಗೂ ಎ. ಶ್ರೀನಿವಾಸ ರಾವ್ ಕಾರ್ಯನಿರ್ವಹಿಸಿದ್ದರು.