ಇತ್ತೀಚಿನ ಸುದ್ದಿ
ಎರಡು ಪ್ರತ್ಯೇಕ ಪ್ರಕರಣ: 53 ಸಾವಿರ ರೂ. ಮೌಲ್ಯದ ಬಾಂಗ್ ಮಿಶ್ರಿತ ಚಾಕಲೇಟ್ ವಶ: ಇಬ್ಬರ ಮೇಲೆ ಕೇಸು ದಾಖಲು
20/07/2023, 21:28
ಮಂಗಳೂರು(reporterkarnataka.com): ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಾಂಗ್ ಮಿಶ್ರಿತ ಚಾಕಲೇಟ್ ಮಾರುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, 53,500 ರೂ. ಮೌಲ್ಯದ ಬಾಂಗ್ ಮಿಶ್ರಿತ ಚಾಕಲೇಟ್ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್ ಬಳಿ ಗೂಡಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೋಲೇಟ್ ನ್ನು ಮಾರಾಟ ಮಾಡುತ್ತಿದ್ದ ಆರೋಪಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45) ಎಂಬಾತನಿಂದ 5,500 ರೂ. ಮೌಲ್ಯದ ಹಿಂದಿ ಭಾಷೆಯಲ್ಲಿ “ಮಹಾಶಕ್ತಿ ಮುನಕ್ಕಾ”, “ಬಮ್ ಬಮ್ ಮುನಕ್ಕಾ ವಟಿ” “ಪಾವರ್ ಮುನಕ್ಕಾ ವಟಿ” ಹಾಗೂ “ಆನಂದ ಚೂರ್ಣ” ಎಂದು ನಮೂದು ಇರುವ ಬಾಂಗ್ ಚಾಕೋಲೆಟ್ ತುಂಬಿರುವ ಪ್ಲಾಸ್ಟಿಕ್ ಪ್ಯಾಕೇಟ್ ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ನಗರದ ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿತ ಚಾಕೋಲೇಟ್ ಮಾರಾಟ ಮಾಡುತ್ತಿದ್ದ ಮನೋಹರ್ ಶೇಟ್ (49 ) ಎಂಬಾತನ ವಶದಿಂದ ಮೂರು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಇಟ್ಟಿದ್ದ ಸುಮಾರು 48,000 ರೂ. ಮೌಲ್ಯದ ಬಾಂಗ್ ನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.