7:35 AM Sunday8 - September 2024
ಬ್ರೇಕಿಂಗ್ ನ್ಯೂಸ್
ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್… ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ಗಣೇಶೋತ್ಸವಕ್ಕೆ ಕಾಂಗ್ರೆಸ್‌ ಸರಕಾರ ಯಾವುದೇ ಅಡ್ಡಿ ಮಾಡಿಲ್ಲ; ಶಾಸಕ ಕಾಮತ್ ಸಂಕುಚಿತ ಭಾವನೆಯಿಂದ… ಓವರ್‌ಟೇಕ್ ವಿವಾದ: ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಬೀದಿ ಜಗಳ; ಪ್ರಕರಣ ದಾಖಲು ತೀರ್ಥಹಳ್ಳಿ: ಎದೆ ನೋವು ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕ ರಸ್ತೆಗೆ ಬಿದ್ದು… ಭಾರಿ ಮಳೆ: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ ದಿಢೀರ್ ವಾಹನ ಸಂಚಾರ ಬದಲಾವಣೆಯಿಂದ ಸಾರ್ವಜನಿಕರಿಗೆ ತೊಂದರೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಬಳ್ಳಾರಿಯಲ್ಲಿ ಸೆ.6ರಂದು ಗೋ ಬ್ಯಾಕ್ ಗವರ್ನರ್ ಚಳವಳಿ: ಕಪ್ಪುಪಟ್ಟಿ, ಬಾವುಟ ಪ್ರದರ್ಶನ ರಾಜಕೀಯ ರಣತಂತ್ರಕ್ಕೆ ಮುದುಡಿದ ಕಮಲ: ನಂಜನಗೂಡು ನಗರಸಭೆ ನೂತನ ಸಾರಥಿಗಳಾಗಿ ಕಾಂಗ್ರೆಸ್ ನ… ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ…

ಇತ್ತೀಚಿನ ಸುದ್ದಿ

ಏನಿದು ಕುಟುಂಬ ಪರಿಕಲ್ಪನೆ?: ಅವಿಭಕ್ತ ಕುಟುಂಬ ನಶಿಸಲು ಕಾರಣವಾದರೂ ಏನು?

09/07/2022, 10:48

ಮಾನವ ಜೀವನ ಒಂದು ವೈಶಿಷ್ಟ್ಯ ಪೂರ್ಣ ಜೀವನ. ಅವನು ಸಂಘ ಜೀವಿ, ಅದರಲ್ಲೂ ಸಮಾಜದ ಅವಿಭಾಜ್ಯ ಅಂಗ . ಸಮಾಜದ ಜೊತೆಗೆ ಅವಿನಾಭಾವ ಸಂಬಂಧಗಳನ್ನು ಹೊಂದಿರುತ್ತಾನೆ. ಮಾನವರು ಸಂಘ ಜೀವಿಯಾಗಿ ಬದುಕು ಕಟ್ಟಿಕೊಳ್ಳಲು ರೂಢಿಸಿಕೊಂಡ ಒಂದು ವ್ಯವಸ್ಥಿತ ಕಟ್ಟುಪಾಡು ಕುಟುಂಬ ಎಂಬ ಪರಿಕಲ್ಪನೆ.

ಪ್ರಥಮವಾಗಿ ಮನುಷ್ಯರು ಕುಟುಂಬದ ಸದಸ್ಯರಾಗಿರುತ್ತಾರೆ. ಕುಟುಂಬ ಎನ್ನುವುದು ವಿವಿಧ ರೀತಿ ರಿವಾಜುಗಳಿಂದ ಕೂಡಿದ ಒಂದು ಚೌಕಟ್ಟು. ಈ ಕುಟುಂಬ ವ್ಯವಸ್ಥೆಯಲ್ಲಿ ಎರಡು ವಿಧ .ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ .ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿ ಇರುತ್ತಿತ್ತು. ಈ ಅವಿಭಕ್ತ ಕುಟುಂಬದಲ್ಲಿ ಅಜ್ಜ ಅಜ್ಜಿ ,ತಂದೆ ತಾಯಿ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವ ಮತ್ತು ಸಹೋದರ ಸಹೋದರಿಯರು ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು .ಈ ಜೀವನ ಅನುಭವ ಇಡೀ ಪ್ರಪಂಚವನ್ನು ಸುತ್ತಿ ಪಡೆದ ಅನುಭವಕ್ಕಿಂತ ಮಿಗಿಲಾದುದು. ಹಿರಿಯರ ಹಿತವಚನ ,ತಪ್ಪಿ ನಡೆದಾಗ ಎಚ್ಚರಿಕೆ ಮಾತುಗಳು, ಎಡವಿದಾಗ ಅಥವಾ ಕುಗ್ಗಿದಾಗ ಧೈರ್ಯ ತುಂಬುವ ಪರಿ ಇವೆಲ್ಲವೂ ನಮ್ಮ ಜೀವನಕ್ಕೆ ಕೌಶಲಗಳನ್ನು ವೃದ್ಧಿಸಲು ಕೊಡುವ ತರಬೇತಿ ಇದ್ದಹಾಗೆ .ಅಣ್ಣ ತಮ್ಮ, ಅಕ್ಕ ತಂಗಿಯರೊಡನೆ ನಡೆಯುವ ಸರಸ ವಿರಸ, ಆಟ ಊಟ ,ನೋವು ನಲಿವು , ತುಂಟಾಟಗಳು ಯಾವುದೇ ಶಾಲಾ ಕಾಲೇಜುಗಳಲ್ಲಿ ಸಿಗದ ಶಿಕ್ಷಣ .ಇಂತಹ ಜೀವನ ಮೌಲ್ಯಗಳು ಸಮಾಜಕ್ಕೆ ಅರ್ಪಿಸುವ ಅವಿಭಕ್ತ ಕುಟುಂಬಗಳ ಸಂಖ್ಯೆ ಇಂದು ಕ್ಷೀಣಿಸಿದೆ .ಇಂದಿನ ಆಧುನಿಕ ಯುಗದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು ಕಂಡು ಬರುತ್ತಿವೆ.

ನಾನು ಇಲ್ಲಿ ಹೇಳ ಬಯಸುವುದು ಅವಿಭಕ್ತ ಕುಟುಂಬ ಸದಸ್ಯರಾಗಿ ಅಲ್ಲಿ ನನ್ನೊಂದಿಗೆ ನಿಕಟ ಮತ್ತು ನನ್ನ ಮನಸ್ಸಿನಲ್ಲಿ ಮರೆಯಲಾಗದ ಅನುಭವವನ್ನುಂಟು ಮಾಡಿದ ನನ್ನ ಅಕ್ಕ ಎಂಬ ಮಾತೆಯ ಬಗ್ಗೆ. ಅಕ್ಕ ಎಂಬ ಎರಡಕ್ಷರದ ಪದ ವಿಶಾಲಾರ್ಥವನ್ನು ಕೊಡುವ ಪದ .ಈ ಪದಕ್ಕೆ ಅತಿ ಮಹತ್ವದ ಸ್ಥಾನವಿದೆ .ಅಕ್ಕ ನಮಗೆ ಎರಡನೇ ತಾಯಿ ಇದ್ದ ಹಾಗೆ .ಕುಟುಂಬ ವ್ಯವಸ್ಥೆಯಲ್ಲಿ ಅಕ್ಕ ಎಂದರೆ ಹಿರಿಯ ಸಹೋದರಿ, ಮನೆಯ ಭಾಗ್ಯಲಕ್ಷ್ಮಿ. ಈಕೆ ಮಮತೆಯ ಖನಿಯಾಗಿ ,ಎರಡನೇ ತಾಯಿಯಾಗಿ, ಗೆಳತಿಯಾಗಿ ,ತ್ಯಾಗಮಯಿಯಾಗಿ ನಮ್ಮೆಲ್ಲರ ಏಳಿಗೆ ಬಯಸುವ ಮಾತೃ ಹೃದಯಿ ತಾಯಿ ಅಕ್ಕ.

ಅವಿಭಕ್ತ ಕುಟುಂಬದಲ್ಲಿ ಹಿರಿಯವಳಾಗಿ ಜನಿಸಿದ ಅಕ್ಕನಿಗೆ ಬಹಳ ಜವಾಬ್ದಾರಿಗಳು ಇರುತ್ತವೆ. ಹಿಂದೆ ಒಂದು ತಾಯಿಗೆ ಏಳೆಂಟು ಮಕ್ಕಳು ಇರುತ್ತಿದ್ದರು .ಅಂತಹ ಸಂದರ್ಭದಲ್ಲಿ ತನ್ನ ತಮ್ಮ ತಂಗಿಯರಿಗೆ ತಾಯಿಯಾಗಿ ಅವರ ಲಾಲನೆ ಪಾಲನೆ ಅಕ್ಕನದು ಆಗಿರುತ್ತಿತು.ಅವರೆಲ್ಲರಿಗೂ ಸ್ನಾನ ಮಾಡಿಸುವುದು, ಆಹಾರ ತಿನ್ನಿಸುವುದು, ಶೌಚ್ಯ ಮಾಡಿಸುವುದು, ಬಟ್ಟೆ ಬರೆಗಳನ್ನು ತೊಳೆಯುವುದು ,ಓದಿಸುವುದು ,ಶಾಲೆಗೆ ಹೋಗಲು ಅಣಿಯಾಗಿಸುವುದು ಮುಂತಾದ ಕಾರ್ಯಗಳನ್ನು ಮಮತೆಯ ತಾಯಿಯಾಗಿ ಅಕ್ಕ ಮಾಡುತ್ತಿದ್ದಳು. ನಮಗೆಲ್ಲರಿಗೂ ಅಕ್ಕ ಎಂದರೆ ಭಯ ಮತ್ತು ಗೌರವ. ನಾವೆಷ್ಟೇ ತಪ್ಪು ಮಾಡಿದರೂ ,ಕೀಟಲೆ  ತುಂಟಾಟ ಮಾಡಿದರೂ ಅವುಗಳನ್ನು ಸಂಯಮದಿಂದ ಸಹಿಸಿಕೊಂಡು ನಮ್ಮ ಏಳಿಗೆಗೋಸ್ಕರ ಶ್ರಮಿಸುತ್ತಿರುವಳು ಅಕ್ಕ. ಕೆಲವೊಮ್ಮೆ ನಾವು ಮಾಡುವ ಅವಾಂತರ ಅಥವಾ ತಪ್ಪುಗಳಿಗೆ ಹಿರಿಯರಿಂದ ಬೈಸಿಕೊಂಡರೂ ನಮ್ಮ ಜೊತೆ ಪ್ರೀತಿ ,ಕಾಳಜಿ ಅಕ್ಕರೆಯಿಂದ ಇರುತ್ತಾಳೆ.

ನಮ್ಮ ಶ್ರೇಯಸ್ಸನ್ನು ಬಯಸುತ್ತಾ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾ ನಮ್ಮ ಜೀವನದಲ್ಲಿ  ಬೆಲೆಕಟ್ಟಲು ಸಾಧ್ಯವಿಲ್ಲದ ಸ್ಥಾನ ಅಕ್ಕನದ್ದು.ಅಂತಹ ತಾಯಿ ಸಮಾನ ಅಕ್ಕ ನಮ್ಮಿಂದ ದೂರವಾದಾಗ ಆಗುವ ದುಃಖ ನೋವು ಅದು ಅನುಭವಿಸಿದವರಿಗಷ್ಟೇ ಗೊತ್ತು .ಅತಿ ಅಮೂಲ್ಯ ವಸ್ತುವನ್ನು ಕಳಕೊಂಡಾಗ ಆಗುವ ಬೇಸರ ,ದುಃಖ ಮತ್ತು ನೋವು ಹೇಳತಿರದು. ಈ ಭಗವಂತ ಎಷ್ಟು ಕ್ರೂರಿ ಎಂದೆನಿಸುತ್ತದೆ .ಅಕ್ಕನ ಅಗಲುವಿಕೆಯನ್ನು ಖಂಡಿತ ಮರೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ .ಅಕ್ಕ ನಮ್ಮ ಜೀವನದ ಅವಿಭಾಜ್ಯ ಅಂಗ .ಅವಳು ಶಾಶ್ವತವಾಗಿ ನಮ್ಮ ಹೃದಯದ ಮಂದಿರದಲ್ಲಿ ನೆಲೆಯಾಗಿರುತ್ತಾಳೆ .

ಇವತ್ತು ನಾವು ತುಂಬಾ  ಕಾರ್ಯದೊತ್ತಡದ ಕಾರಣದಿಂದಾಗಿಯೋ, ಸಾಮಾಜಿಕ ಜಾಲತಾಣಗಳಲ್ಲಿ  ಮುಳುಗಿರುವುದರಿಂದಾಗಿಯೋ ಕುಟುಂಬದ ಜೊತೆ ಸಮಯ ಕಳೆಯುವುದು ಕಡಿಮೆಯಾಗಿದೆ .ಆದುದರಿಂದ ಪ್ರತೀ ಸಂಬಂಧಗಳಿಗೂ ಗೌರವ ,ಸಮಯ ನೀಡಿ .ಇಲ್ಲದಿದ್ದರೆ  ನಾಳಿನ ದಿನಗಳಲ್ಲಿ ಸಮಯ ಇರಬಹುದು ಆದರೆ ಸಂಬಂಧ ಉಳಿಯದಿರಬಹುದು ಅಥವಾ ಅಗಲಬಹುದು. ಆದುದರಿಂದ ಬಿಡುವಿದ್ದಾಗ ಎಲ್ಲಾ ಸಂಬಂಧಗಳಿಗೂ ಸಮಯ ಗೌರವ ನೀಡಿ ಎಂಬುದು ನನ್ನ ಕಳಕಳಿಯ ನಿವೇದನೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು