ಇತ್ತೀಚಿನ ಸುದ್ದಿ
ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಜ್ಞೆ
07/12/2025, 14:09
•*ಡ್ರಗ್ಸ್ ಮುಕ್ತ ಕರ್ನಾಟಕ್ಕಾಗಿ ವಿಂಟೇಜ್ ಕಾರ್ ರ‍್ಯಾಲಿ ಉದ್ಘಾಟನೆ*
⦁*2 ವರ್ಷಗಳಲ್ಲಿ 300 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ*
ಬೆಂಗಳೂರು(reporterkarnataka.com): ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ ಸಾರಿದ್ದು, ಗುರಿ ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಗೃಹ ಸಿವ ಡಾ.ಜಿ.ಪರಮೇಶ್ವರ ಹೇಳಿದರು.








ಬೆಂಗಳೂರು ಸಿಟಿ ಪೊಲೀಸ್ ಹಾಗೂ ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್ಎಚ್ ವಿಐ) ಸಹಯೋಗದಲ್ಲಿ ಪೌಲ್ ಜಾನ್ ರೆಸಾರ್ಟ್ ಮತ್ತು ಹೊಟೇಲ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ವಿಂಟೇಜ್ ಕಾರ್ ರ‍್ಯಾಲಿ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
“ಕರ್ನಾಟಕ ಮಾತ್ರವಲ್ಲ, ವಿಶ್ವದೆಲ್ಲೆಡೆ ಸಮಾಜ ಮಾದಕ ವ್ಯಸನದ ಜತೆ ಹೋಗುತ್ತಿದೆ. ಮಾದಕ ವಸ್ತುಗಳನ್ನು ಯಾರು ಬೆಂಬಲಿಸುತ್ತಾರೋ ಅವರು ಮನುಷ್ಯರಲ್ಲ, ಜನರ ಜೀವನದ ಜತೆ ಆಟವಾಡುತ್ತಾರೆ. ಅವರ ಭವಿಷ್ಯ, ಆರೋಗ್ಯವನ್ನು ನಾಶ ಮಾಡುತ್ತಾರೆ. ಇದನ್ನು ಮನಗಂಡು ನಮ್ಮ ಸರ್ಕಾರ ಕರ್ನಾಟಕವನ್ನು ಮಾದಕ ವ್ಯಸನ ಮಕ್ತ ರಾಜ್ಯವಾಗಿ ರೂಪಿಸುವ ಬಗ್ಗೆ ಸರ್ಕಾರ ಘೋಷಿಸಿತ್ತು,” ಎಂದರು.
“ಘೋಷಣೆಯಾದ ಕೂಡಲೇ ಕರ್ನಾಟಕ ಮಾದಕ ವ್ಯಸನ ಮುಕ್ತವಾಯಿತು ಎಂದು ಅರ್ಥವಲ್ಲ. ಅದರ ವಿರುದ್ಧ ಯುದ್ಧ ಆರಂಭಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ಯುದ್ಧ ಮಾಡುತ್ತಿದ್ದಾರೆ. ಇದರ ಪರಿಣಾಮ ಕಳೆದ ವರ್ಷದಿಂದ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಜನರನ್ನು ಬಂಧಿಸಿದ್ದು, ಕೆಲವರು ಇನ್ನೂ ಜೈಲಿನಲ್ಲಿದ್ದಾರೆ. ವಿದೇಶದಿಂದ ಶಿಕ್ಷಣಕ್ಕಾಗಿ ಬಂದವರೂ ಇಂಥ ದುಷ್ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ,” ಎಂದು ಹೇಳಿದರು.
“ಡ್ರಗ್ಸ್ ದಂಧೆಕೋರರು ಎಷ್ಟು ಕೀಳು ಮಟ್ಟಕ್ಕೆ ಇಳಿದ್ದಾರೆ ಎಂದರೆ, ಶಾಲೆಗೆ ತೆರಳಿ ಚಾಕೋಲೇಟ್ ಮೂಲಕ ಮಕ್ಕಳಿಗೆ ಉಚಿತವಾಗಿ ಡ್ರಗ್ಸ್ ಹಂಚುತ್ತಿದ್ದಾರೆ. ಮಕ್ಕಳು ಅದಕ್ಕೆ ದಾಸರಾಗುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ,” ಎಂದು ಹೇಳಿದ ಸಚಿವರು, ಮಾದಕ ವಸ್ತುಗಳ ಬಳಕೆಯಿಂದ ದೂರ ಇರಬೇಕು ಎಂದು ವಿದ್ಯಾರ್ಥಿ ಸಮುದಾಯ ಮತ್ತು ಐಟಿ ಪದವೀಧರರು ಸೇರಿದಂತೆ ಯುವ ಸಮುದಾಯವನ್ನು ಮನವಿ ಮಾಡಿದರು.
ಕಾರ್ಯಕ್ರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎಸ್.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಫೆಡೆರೇಷನ್ ಆಫ್ ಹಿಸ್ಟೋರಿಕಲ್ ವೆಹಿಕಲ್ ಇಂಡಿಯಾದ ಡಾ.ರವಿಪ್ರಕಾಶ್, ಚಿತ್ರನಟ ಮದನ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು.
ವಿಧಾನಸೌಧದ ಮುಭಾಗದಿಂದ ಹೊಟ ವಿಂಟೇಜ್ ಕಾರುಗಳ ಈ ಆಕರ್ಷಕ ಮೆರವಣಿಗೆ, ಬಿಗ್ ಬನಿಯಾನ್ ವೈನ್‌ಯಾರ್ಡ್ ಅಂಡ್ ರೆಸಾರ್ಟ್ ತನಕ ಸಾಗಿತು. ಸಾವಿರಾರು ಮಂದಿ ರಸ್ತೆ ಬದಿ ನಿಂತು ಮೆರವಣಿಗೆ ವೀಕ್ಷಿಸಿದರು.












