ಇತ್ತೀಚಿನ ಸುದ್ದಿ
ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಶೀಘ್ರ ಆಯುಷ್ ಸ್ಪೋರ್ಟ್ಸ್ ಮೆಡಿಸಿನ್ ಕಾಂಪ್ಲೆಕ್ಸ್ ಆರಂಭ
02/11/2023, 22:59

ಮಂಗಳೂರು(reporterkarnataka.com): ದೇಶದಲ್ಲಿಯೇ ಪ್ರಥಮ ಬಾರಿಗೆ ಆಯುಷ್ ಸ್ಫೋಟ್ಸ್ ಮೆಡಿಸಿನ್ ಕಾಂಪ್ಲೆಕ್ಸ್ ನಗರದ ವೆನ್ಲಾಕ್ ಆಯುಷ್ ಆಸ್ಪತ್ರೆಯ ಮೂಲಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಹೇಳಿದರು.
ಅವರು ಇಂದು ನಗರದ ಆಯುಷ್ ಆಸ್ಪತ್ರೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವೆನ್ಲಾಕ್ ಆಯುಷ್ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಏಕಕಾಲದಲ್ಲಿ 96 ಆಯುಷ್ ಥೆರಪಿಗಳನ್ನು ನೀಡುವ ಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯ ದ ನರಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ನಿಮ್ಹಾನ್ಸ್ ಆಸ್ಪತ್ರೆಯ ರೀತಿಯಲ್ಲಿ ಎಲುಬು ಮತ್ತು ಅಸ್ತಮ ಚಿಕಿತ್ಸೆಗೆ ದೇಶದಲ್ಲಿ ಉತ್ಕೃಷ್ಟ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಎನ್ ಎಬಿಎಚ್ ಮಾನ್ಯತೆ ದೊರೆತರೆ ಎಲುಬು ಮತ್ತು ಆಯುಷ್ ಚಿಕಿತ್ಸೆ ನೀಡುವ ದೇಶದ ಪ್ರಥಮ ಆಸ್ಪತ್ರೆಯಾಗಲಿದೆ ಎಂದು ಡಾ.ಆನಂದ ತಿಳಿಸಿದರು.
ವೆನ್ಲಾಕ್ ಆಯುಷ್ ಆಸ್ಪತ್ರೆಯ ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಇಕ್ಬಾಲ್ ಮಾತನಾಡುತ್ತಾ, ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡುವ ಆಯುಷ್ ಚಿಕಿತ್ಸಾ ವಿಭಾಗವನ್ನು ವೆನ್ಲಾಕ್ ಆಸ್ಪತ್ರೆಯ ವತಿಯಿಂದ ಆರಂಭಿಸಲಾಗುವುದು. ಪೂರ್ಣ ಪ್ರಮಾಣದ ಸಿಬ್ಬಂದಿ ಗಳ ನೇಮಕಾತಿ ಆದ ಬಳಿಕ ಇನ್ನಷ್ಟು ಸೇವೆ ನೀಡಲು ಸಾಧ್ಯ. ಪ್ರಸಕ್ತ ವೆನ್ಲಾಕ್ ಆಯುಶ್ ಆಸ್ಪತ್ರೆಯಲ್ಲಿ ಸರಾಸರಿ 250ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ಹಾಜರಾಗುತ್ತಿದ್ದಾರೆ ಎಂದು ನುಡಿದರು.
ಸಮಾರಂಭದಲ್ಲಿ ವೈದ್ಯರಾದ ಸೈಯ್ಯದ್ ಹುಸೈನ್,ಡಾ.ಬಸವರಾಜ್, ಡಾ.ಯಶ್ವಿತ್, ಡಾ.ಪ್ರಕಾಶ್ , ಡಾ.ಅಜಿತ್ ನಾಥ್ ಇಂದ್ರ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ವೆನ್ಲಾಕ್ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಕಾಶ್, ಹಿರಿಯ ಪತ್ರಕರ್ತ ರಾದ ಆನಂದ ಶೆಟ್ಟಿ, ಅನ್ನು ಮಂಗಳೂರು, ಭಾಸ್ಕರ ರೈ ಕಟ್ಟ,ಪುಷ್ಪ ರಾಜ್ ಬಿ.ಎನ್., ಆರಿಫ್ ಪಡುಬಿದ್ರಿ, ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು.