ಇತ್ತೀಚಿನ ಸುದ್ದಿ
ಮೋಸ್ಟ್ ವಾಂಟೆಡ್ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ
13/05/2025, 10:31

ಹುಬ್ಬಳ್ಳಿ(reporterkarnataka.com): ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯತ್ತ ಸಾಗಿದ ಸಶಕ್ತ, ಸದೃಢ ಭಾರತವನ್ನು ಅಸ್ಥಿರಗೊಳಿಸುವ ಸಂಚು ದೇಶದ ಒಳ-ಹೊರಗಿನಿಂದ ನಡೆಯುತ್ತಿದೆ. ಆದರೆ, ಭಾರತ ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಎಬಿವಿಪಿ ಆಯೋಜಿಸಿದ್ದ “ಸಂವಿಧಾನ 75 ಬದಲಾಯಿಸಿದ್ದು, ಯಾರು? ಬಲಪಡಿಸಿದ್ದು ಯಾರು?” ಅತ್ಯಮೂಲ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಇಂದು ಆರ್ಥಿಕವಾಗಿ ಬೆಳೆಯುತ್ತಿರುವುದನ್ನು ವಿರೋಧಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದರ ಪರಿಣಾಮವೇ ಪಹಲ್ಗಾಮ್‌ನಂತಹ ಭಯೋತ್ಪಾದನೆ ಚಟುವಟಿಕೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2008ರಿಂದ 2014ರವರೆಗೆ ಆರ್ಥಿಕತೆ ಸೇರಿದಂತೆ ಎಲ್ಲದರಲ್ಲೂ ಅತ್ಯಂತ ದುರ್ಬಲವಾಗಿದ್ದ ಭಾರತ ಇಂದು ಜಗತ್ತಿನಲ್ಲೇ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿದೆ. ಅಲ್ಲದೇ, 4ನೇ ಅತಿ ದೊಡ್ಡ ಮಿಲಿಟರಿ ಶಕ್ತಿ ಸಹ ಭಾರತದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ನೈಜ ಪರಿವರ್ತನೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದನ್ನೆಲ್ಲ ಬುಡಮೇಲು ಮಾಡುವ ಪ್ರಯತ್ನ ನಡೆದಿದೆ ಎಂದು ಖಂಡಿಸಿದರು.
ಪಹಲ್ಗಾಮ್ ಭಯೋತ್ಪಾದನೆ ವಿರುದ್ಧದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರನ್ನು ನಿರ್ನಾಮ ಮಾಡುವಲ್ಲಿ ನಮ್ಮ ಸೇನೆ ಯಶಸ್ವಿಯಾಗಿದೆ. ಇನ್ನು ಮುಂದೆ ಉಗ್ರರು ಕೆಮ್ಮಿದರೆ ಸಾಕು ಪಾಕಿಸ್ತಾನದ ಒಳ ನುಗ್ಗಿ ತಕ್ಕ ಶಾಸ್ತಿ ಮಾಡುತ್ತೇವೆ. ಸದ್ಯ ಗಡಿಯಲ್ಲೇ ನಿಂತು ಪಾಠ ಕಲಿಸಿದ್ದೇವೆ. ವಿಶ್ವ ಸಂಸ್ಥೆಯನ್ನೂ ಲೆಕ್ಕಿಸದೆ ಪ್ರತಿದಾಳಿ ಮಾಡಿದ್ದೇವೆ ಎಂದು ಹೇಳಿದರು.
ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವ ಭಾರತ ಅಭಿವೃದ್ಧಿಗಾಗಿ 100 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಒಮ್ಮೆಗೇ 1500 ವಿಮಾನಗಳಿಗೆ ಆರ್ಡರ್ ಕೊಟ್ಟ ಏಕೈಕ ರಾಷ್ಟ್ರ ಭಾರತವಾಗಿದೆ. ಬಲಿಷ್ಠ ಭಾರತವನ್ನು ಅಸ್ಥಿರಗೊಳಿಸಲೆಂದೇ ಪಾಕಿಸ್ತಾನ ಭಯೋತ್ಪಾದನೆ ಕೃತ್ಯ ನಡೆಸುತ್ತಿದೆ. ಆದರೆ, ಭಾರತ ಬಲಿಷ್ಠವಾಗಿದೆ ಇದ್ಯಾವುದಕ್ಕೂ ಜಗ್ಗುವುದಿಲ್ಲ. ಕೆಮ್ಮಿದರೆ ಸಾಕು ಭಾರತೀಯ ಸೇನೆ ಒಳ ನುಗ್ಗಿ ತಕ್ಕ ಶಾಸ್ತಿ ಮಾಡುತ್ತದೆ ಎಂದು ಜೋಶಿ ಗುಡುಗಿದರು.
ದೇಶದಲ್ಲಿ ಒಂದು ಕಡೆ ಭಯೋತ್ಪಾದನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮಾಜವನ್ನು ವಿಭಸುವಂತಹ ಪ್ರಯತ್ನ ನಡೆದಿದೆ. ಸಂವಿಧಾನ ಬದಲಾವಣೆ, ಮೀಸಲಾತಿ ಹಿಂಪಡೆಯುತ್ತಾರೆ ಎಂಬ ಕೂಗೆಬ್ಬಿಸುತ್ತಿದ್ದಾರೆ. ಸಶಕ್ತ ಭಾರತದಲ್ಲಿ ಏನು ಸಂದೇಶ ನೀಡಲು ಹೊರಟಿದ್ದಾರೆ ಇವರು ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.