ಇತ್ತೀಚಿನ ಸುದ್ದಿ
ಹೀಗೊಂದು ಹೃದಯ ವಿದ್ರಾಯಕ ಘಟನೆ: ಅತ್ತ ಆಸ್ಪತ್ರೆ ಶವಾಗಾರದಲ್ಲಿ ಹೆಣವಾಗಿ ಮಲಗಿದ್ದ ಅಪ್ಪ; ಇತ್ತ ಮಗಳ ವಿವಾಹ ಸಂಭ್ರಮ
20/01/2025, 18:14
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅತ್ತ ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪನ ಶವ. ಇತ್ತ ಮದುವೆ ಮಂಟಪದಲ್ಲಿ ಮಗಳಿಗೆ ಮದುವೆ ವೈಭವ ನಡೆದ ಹೃದಯ ವಿದ್ರಾಯಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ಅಪ್ಪ ಮದುವೆ ಓಡಾಟದಲ್ಲಿ ಸುಸ್ತಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಗಳನ್ನು ನಂಬಿಸಿ ಸಂಬಂಧಿಕರು ಈ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಮೃತರ ಪತ್ನಿಗೂ ಇದೇ ರೀತಿ ಹೇಳಿ ನಂಬಿಸಲಾಗಿತ್ತು.
ಮಗಳ ಮದುವೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಅಪ್ಪ
ಚೀಲದ ಪಾಪಣ್ಣನವರ ಮಗ ಚಂದ್ರು (45)
ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮಗಳಿಗೆ-ಪತ್ನಿಗೆ ಈ ವಿಷಯವನ್ನು ಸಂಬಂಧಿಕರು ತಿಳಿಸದೆ ಚಂದ್ರು ಮಗಳು ದೀಕ್ಷೀತಾಳ ಮದುವೆಯನ್ನು ಇಂದು ಸಂಬಂಧಿಕರು ನೆರವೇರಿಸಿದ್ದಾರೆ.
ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ಅವರು ತರೀಕೆರೆಗೆ ವಾಪಸ್ ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ನಂಬಿಸಿ ಸಂಬಂಧಿಕರು ಆರತಕ್ಷತೆ-ಮದುವೆ ಮುಗಿಸಿದ್ದಾರೆ.
ಇಂದು ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಕುಟುಂಬಸ್ಥರು ವಿಷಯ ತಿಳಿಸಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪತ್ನಿ-ಮಗಳ ಆಕ್ರಂದನ ಮುಗಿಲು ಮುಟ್ಟಿದೆ.