ಇತ್ತೀಚಿನ ಸುದ್ದಿ
ವಿಜಯನಗರ: ಭಕ್ತಿ- ಶ್ರದ್ಧೆಯಿಂದ ಗೌರಿದೇವಿ ಹಬ್ಬ ಆಚರಣೆ; ಬಾಲೆಯರಿಗೆ ಸೀರೆ ಉಡಿಸಿ ಅಲಂಕಾರ
22/11/2021, 11:22
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಸೇರಿದಂತೆ ಹಲವೆಡೆಗಳಲ್ಲಿ ಶಕ್ತಿದಾತೆ ಹಾಗೂ ಬುದ್ದಿದಾತೆ ಶ್ರೀಗೌರಿದೇವಿಯ ಆರಾಧನೆ ನಡೆಯಿತು.
ಮಕ್ಕಳು, ರೈತರು ಹಾಗೂ ರೈತ ಹೆಂಗಳೆಯರ ಗ್ರಾಮೀಣ ಪ್ರದೇಶದ ವಿಶೇಷ ಹಬ್ಬ ಗೌರಿದೇವಿ ಹಬ್ಬವಾಗಿದೆ. ಗೌರಿ ಹುಣ್ಣಿಮೆಯಂದು ಪ್ರತಿಷ್ಟಾಪಿಸಲ್ಪಡುವ ಗೌರಿ, ಮೂರು ದಿನಗಳ ಕಾಲ ಆರಾಧಿಸಲ್ಪಡುತ್ತಾಳೆ. ನಂತರ ಮೂರನೇ ದಿನದಂದು ಹೆಣ್ಣು ಮಕ್ಕಳು ಅಥವಾ ಕನ್ಯೆಯರು ಗೌರಿಯನ್ನ ಸಕ್ಕರೆ ಆರತಿ ಬೆಳಗುವುದರೊಂದಿಗೆ ವಿಧಿವತ್ತಾಗಿ ಆರಾಧಿಸಿ ಹಬ್ಬ ಆಚರಿಸುತ್ತಾರೆ. ಸ್ಥಳೀಯ ಹಿರಿಯರು ರಾತ್ರಿಹೊತ್ತಿನವರೆಗೆ ಭಜನೆ ವಿಶೇಷ ಪೂಜೆಗಳನ್ನು ಆಚರಿಸಿ ನಂತರ ತಡರಾತ್ರಿ ಗೌರಿಯನ್ನು ವಿಧಿವತ್ತಾಗಿ ಗಂಗೆ ಕಾಣಿಸುವುದೆ ಮೂಲಕ ಗೌರಿಹಬ್ಬಕ್ಕೆ ಅಂತ್ಯವಾಡುತ್ತಾರೆ.
ಗೌರಿಹಬ್ಬ ಎಂದಾಕ್ಷಣ ಗೌರಿ ಮಕ್ಕಳು ಸಹಜವಾಗಿಯೇ ನೆನಪಾಗುತ್ತಾರೆ. ಬಾಲೆಯರು ಕುವರಿಯರು, ಅವರಮ್ಮಂದಿರು ಉಡಿಸಿದ ಸೀರೆಯಲ್ಲಿ ಸಾಕ್ಷಾತ್ ಗೌರಿಯಂತೆ ಗೋಚರಿಸುತ್ತಾರೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಗೌರಿಹುಡಿಗೇರು ಗೌರಿ ಮಕ್ಕಳು ಎಂದು ಕರೆಸಿಕೊಳ್ಳುತ್ತಾರೆ ಕನ್ಯೆಯರು. ಗೌರಿಹಬ್ಬ ರೈತಾಪಿಗರ ಗ್ರಾಮೀಣ ಜನರ ಹೆಂಗಳಯರ ಹೆಣ್ಣು ಮಕ್ಕಳ ಹಾಗೂ ಕನ್ಯಾಮಣಿಗಳ ಬಹುಪ್ರಿಯವಾದ ಹಬ್ಬವಾಗಿದೆ.ಹಲವೆಡೆಗಳಲ್ಲಿ ಗೌರಿ ಹಬ್ಬದ ಸಮಯದಲ್ಲಿ ಹಿರಿಯೆ ಹಬ್ಬ ಆಚರಿಸಲಾಗುತ್ತದೆ. ಮನೆಮಂದಿಯಲ್ಲಾ ಮಡಿ ಮುಡಿಯಿಂದ ಹಾಗೂ ಸಿಹಿಖಾದ್ಯಗಳ ಭೂರಿ ಭೋಜನ ತಾಯಾರಿಸಿ, ಮನೆಯ ಹಿರಿಯರಿಗೆ ಹೆಂಗಸರು ಮಕ್ಕಳು ವೃದ್ಧರಾದಿಯಾಗಿ ಹೊಚ್ಚ ಹೊಸ ಬಟ್ಟೆಗಳನ್ನು ಧರಿಸಿ ಕಾಲನ ಕರೆಗೆ ಓಗೊಟ್ಟು ಇಹಲೋಕ ತೊರೆದ ಮನೆಯ ಹಿರಿಯರ ಹೆಸರಲ್ಲಿ ಬಟ್ಟೆ ಸಮೇತ ಅವರ ಇಷ್ಟದಡಿಗೆ ಮಾಡಿ ಎಡೆಮಾಡುತ್ತಾರೆ.ಈ ಮೂಲಕ ಹಿರಿಯರ ಹಾಗೂ ಕಿರಿಯರ ಬಹುಪ್ರಿಯವಾದ ಹಬ್ಬ,ರೈತಾಪಿ ಜನರ ಗ್ರಾಮೀಣ ಜಾನಪದ ಹಬ್ಬ ಸಕ್ಕರೆ ಆರತಿಯ ಹಬ್ಬ ಶ್ರೀಗೌರಿಹಬ್ಬವಾಗಿದೆ. ಹಬ್ಬವನ್ನು ವಿಜಯನಗರ ಜಿಲ್ಲೆಯಾದ್ಯಾಂತ ಬಹು ಅರ್ಥಪೂರ್ಣವಾಗಿ, ಸಾಂಪ್ರದಾಯಿಕವಾಗಿ ಶಾಸ್ತ್ರೋಕ್ತವಾಗಿ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.