ಇತ್ತೀಚಿನ ಸುದ್ದಿ
ವಿದ್ಯುತ್ ಸರಬರಾಜು ಬಿಲ್ ಹಣ ಪಾವತಿಸಲು ರಾಜ್ಯ ಸರ್ಕಾರದಿಂದ ವಿಳಂಬ: ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪ
24/01/2025, 21:45
ಬೆಂಗಳೂರು(reporterkarnataka.com): ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿ ಸರಬರಾಜು ಮಾಡುವ ವಿದ್ಯುತ್ ಗೆ ರಾಜ್ಯ ಸರ್ಕಾರ ಆರು ತಿಂಗಳಾದರೂ ಹಣ ಪಾವತಿಸದ ಕಾರಣ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಮಸ್ಯೆಗೆ ಸಿಲುಕಿದೆ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷ, ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಆರೋಪಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಪೂರೈಸುವ ಎಥೆನಾಲ್‍ಗೆ ಕೇಂದ್ರ ಸರ್ಕಾರ 10 ದಿನದ ಒಳಗೆ ಹಣ ಪಾವತಿಸುತ್ತದೆ. ಆದರೆ ರಾಜ್ಯ ಸರ್ಕಾರ ಆರು ತಿಂಗಳಾದರೂ ಹಣ ಪಾವತಿಸಿಲ್ಲ. ಇದರಿಂದ ಕಾರ್ಖಾನೆಗಳು ಸಮಸ್ಯೆಗೆ ಸಿಲುಕಿವೆ. ಆದ್ದರಿಂದ 15 ದಿನಗಳಿಂದ ಒಂದು ತಿಂಗಳೊಳಗೆ ಹಣ ಪಾವತಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕಳೆದ ವರ್ಷ ಬರಗಾಲದಿಂದಾಗಿ ಎಥೆನಾಲ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಉತ್ಪಾದನೆ ಆರಂಭವಾಗಿದ್ದು, ಕಬ್ಬು ಮಾತ್ರವಲ್ಲದೆ, ಮೆಕ್ಕೆಜೋಳ ಮತ್ತು ಅಕ್ಕಿಯಿದಲೂ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷದ ಬೆಳೆಗಳಿಂದ ಈ ಬಾರಿ ಒಂದು ಸಾವಿರ ಕೋಟಿ ಎಥೆನಾಲ್ ಉತ್ಪಾದಿಸಲಾಗಿದೆ. ಹೀಗಾಗಿ ಈ ಎಥೆನಾಲ್ ಖರೀದಿಸಿ ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಪೆಟ್ರೋಲ್‍ಗೆ ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಡೀಸೆಲ್ ಗೂ ಇದನ್ನು ಮಿಶ್ರಣ ಮಾಡಲಾಗುವುದು. 10 ವರ್ಷದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬದಲು ಎಲೆಕ್ಟ್ರಿಕ್ ಮತ್ತು ಎಥೆನಾಲ್‍ನಿಂದ ಓಡುವ ವಾಹನಗಳು ಬರುತ್ತವೆ. ಅದೇ ರೀತಿ ವಿಮಾನಗಳಿಗೂ ಎಥೆನಾಲ್ ಬಳಕೆ ಮಾಡಲು ಅವಕಾಶ ಇದೆ. ಜೆಟ್ ಫ್ಯೂಯಲ್ (ವಿಮಾನಗಳ ಪೆಟ್ರೋಲ್)ಗೆ ಶೇ.5ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಆಗಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಸೂಕ್ತ ಸಮಯದಲ್ಲಿ ಕಾರ್ಖಾನೆಗಳಿಗೆ ದರ ಪಾವತಿಸಿ ಎಥೆನಾಲ್ ಗೆ
ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
*ಎಥೆನಾಲ್ ಆದಾಯದ ಶೇ. 75 ಪಾಲು ರೈತರಿಗೆ:*
ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್‍ನಿಂದ ಬರುವ ಆದಾಯದಲ್ಲಿ ರೈತರಿಗೆ ಹೆಚ್ಚು ಪಾಲು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಎಥೆನಾಲ್ ನಿಂದ ಬರುವ ಆದಾಯದಲ್ಲಿ ಶೇ. 70ರಿಂದ ಶೇ. 75ರಷ್ಟನ್ನು ರೈತರಿಗೆ ಮತ್ತು ಶೇ. 25ನ್ನು ಕಂಪನಿ ಮಾಲೀಸರಿಗೆ ನೀಡಲು ಶಿಫಾರಸು ಮಾಡಿದೆ ಎಂದು ತಿಳಿಸಿದರು.
ದೇಶದಲ್ಲಿ ಕಬ್ಬು ಮಹತ್ವದ ಬೆಳೆಯಾಗಿದ್ದು, ಸುಮಾರು 11 ಕೋಟಿ ರೈತರು ಕಬ್ಬು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸ್ತುತ ಸಕ್ಕರೆ ಬೆಲೆ ಕಡಿಮೆ ಇದ್ದರೂ ಕಬ್ಬು ಸರಬರಾಜು ಮಾಡುವ ರೈತರಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಹೀಗಾಗಿ ಸಕ್ಕರೆ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಿಂಜಾಲನ್ ಶಾಯ್ ಬಾಲಾಜಿ ಸುಗಾವೊ ಮುಖ್ಯರಸ್ಥರಾದ ಪ್ರಜ್ವಲ್. ಎಚ್.ಪಾಟೀಲ್, ಎಂ.ಡಿ. ಮೈಲಾರ ಸುಗಾಸ್‍ನ ವ್ಯವಸ್ಥಾಪಕ ನಿರ್ದೇಶಕ ಉದಯ ಪುರಾಣಿಕಮಠ, ಮೆಲ್‍ಬೇ ಸಾಗಸ್‍ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಮೆಲ್ಲಿಗೇರಿ, ಬಿದರ್ ಕಿಸಾನ್ ಸುಗಾಸ್ ಅಧ್ಯಕ್ಷ ಕಲಿಂಜಾಶ್ ಸಮಯಾದ್, ದಕ್ಷಿಣ ಭಾರತ ಸಾಗರ್ ಮಿಲ್ ಎಸಿಸಿ ಅಧ್ಯಕ್ಷ ಯೋಗೇಶ್ ಪಾಡಿ, ಜಂಪ್ ಸೇಜಿಂಗ್ ಸಲಹೆಗಾರ ಮುರ್ಗೆಶನ್ ಉಪಸ್ಥಿತರಿದ್ದರು.
((((ಬಾಕ್ಸ್))))
*ಪ್ರಹ್ಲಾದ್ ಜೋಶಿಗೆ ಅಭಿನಂದನೆ*
ಕಬ್ಬಿನ ದರಕ್ಕೆ ಹೋಲಿಸಿದರೆ ಸಕ್ಕರೆಗೆ ಕಡಿಮೆ ಬೆಲೆ ಇದೆ. ಹೀಗಾಗಿ ಸಕ್ಕರೆ ಬೆಲೆ ಹೆಚ್ಚಿಸಬೇಕು ಮತ್ತು ರಫ್ತಿಗೆ ಅನುಮತಿ ನೀಡಬೇಕು ಎಂದು ಹಲವು ಬಾರಿ ಕೇಂದ್ರ ಸರ್ಕಾರವನ್ನು ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ. ಅದಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ರಾಜ್ಯದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಸರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುರುಗೇಶ್ ಆರ್. ನಿರಾಣಿ ಹೇಳಿದರು.
ಕಬ್ಬು ಬೆಳೆಗಾರರಿಗೆ ನಿಗದಿಪಡಿಸಿದ ಎಂಎಸ್ ಪಿ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸಿದ ಅವರು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಂಎಸ್ ಪಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
.