ಇತ್ತೀಚಿನ ಸುದ್ದಿ
ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ತನಿಖಾಧಿಕಾರಿಯಿಂದಲೇ ಸಂತ್ರಸ್ತೆಗೆ ಮಾನಸಿಕ ಕಿರುಕುಳ: ಪ್ರಸನ್ನ ರವಿ ಆರೋಪ
07/12/2021, 18:04
ಮಂಗಳೂರು(reporterkarnataka.com): ವಕೀಲ ರಾಜೇಶ್ ಭಟ್ ಅವರಿಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯೇ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಕೊಟ್ಟು ತೇಜೋವಧೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರು ಜತೆ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಡಿಸಿಪಿ ಹರಿರಾಂ ಶಂಕರ್‌ಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದ ತನಿಖೆ ಆರಂಭವಾದಾಗಿನಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ 4 ತಂಡ ರಚಿಸಿದ್ದೇವೆ ಎಂದು ಹೇಳಿಕೆ ಕೊಡುತ್ತಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಸಂತ್ರಸ್ತೆಯನ್ನು ತನಿಖೆಗೆ ಕರೆದಾಗ ಹೇಳುತ್ತಾರೆ ‘ನೀನು ಯಾಕೆ ಹೋರಾಟ ಮಾಡುತ್ತಿ, ಆರೋಪಿಯ ಹೆಂಡತಿ ಚಿಂತೆಯಲ್ಲಿದ್ದಾರೆಂದು ಕೇಳುತ್ತಾರೆ. ಈವರೆಗೆ ತನಿಖಾಧಿಕಾರಿಯವರ ತಂಡ ನಮಗೆ ಉಪದ್ರವ ಮಾಡುವುದು ಬಿಟ್ಟು ಏನೂ ಮಾಡಿಲ್ಲ ಎಂದರು.
ನಾವು ಪ್ರತಿಭಟನೆ ನಡೆಸುವಾಗ ನಮಗೆ ನೀತಿ ಸಂಹಿತೆ ಹೆಸರಿನಲ್ಲಿ ಅವಕಾಶವಿಲ್ಲ, ಆದರೆ ಉಳಿದಿರುವವರು ಈ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಯಾಕೆ ನೀವು ಅನುಮತಿ ನೀಡುತ್ತಿದ್ದೀರಿ. ಕಾನೂನು ನಮ್ಮ ಪರವಾಗಿದೆ. ಜೊತೆಗೆ ಹೋರಾಟ ಮಾಡುವ ವಿದ್ಯಾರ್ಥಿಗಳನ್ನು ಯೂಸ್‌ಲೆಸ್ ಹೇಳುತ್ತಿದ್ದಾರೆ.
ಇತ್ತೀಚೆಗೆ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದೇನೆ ಎಂದಿದ್ದಾರೆ. ಆದರೆ ಎಲ್ಲಿ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರೈಲ್ವೇ ನಿಲ್ದಾಣದಲ್ಲಿ ಕೇಳಿದಾಗ ಅದಕ್ಕೆ ಸಂಬಂಧಿಸಿದ ದಾಖಲೆ ಇಲ್ಲ ಎಂದಿದ್ದಾರೆ. ಕಮೀಷನರ್ ಬಗ್ಗೆ ವೈಯುಕ್ತಿಕ ದ್ವೇಷ ಇಲ್ಲ ಗೌರವ ಇದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಬಗ್ಗೆ ವೈಯುಕ್ತಿಕ ದ್ವೇಷ ಇಲ್ಲ, ಗೌರವ ಇದೆ. ಆದರೆ ಈ ರೀತಿ ಮಾಡುವುದು ಬೇಸರ ತರಿಸುತ್ತಿದೆ. ನಾವು ಆರೋಪಿಯ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದರು.
ಇದೇ ವೇಳೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ತನುಷ್ ಶೆಟ್ಟಿ ಮಾತನಾಡಿ, ದೆಹಲಿ, ಯುಪಿಯಲ್ಲಿ ಇಂತಹ ಘಟನೆ ನಡೆದಾಗ ಇಲ್ಲಿನ ರಾಜಕೀಯ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಆದರೆ ನಮ್ಮದೇ ತುಳುನಾಡಲ್ಲಿ ಆದ ಅನ್ಯಾಯವನ್ನು ಖಂಡಿಸಲು ಯಾವುದೇ ನಾಯಕರು ಬಂದಿಲ್ಲ. ಅದೊಂದು ಬೇಸರ ಇದೆ. ಈ ಬಗ್ಗೆ ಎಲ್ಲರ ಬೆಂಬಲ ಕೇಳಿದ್ದೇವೆ. ಸದ್ಯದಲ್ಲೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದರು.














