10:52 AM Wednesday15 - January 2025
ಬ್ರೇಕಿಂಗ್ ನ್ಯೂಸ್
ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ವರ್ಗದಲ್ಲಿ ಸಾಮರಸ್ಯಕ್ಕೆ ಯೋಜನೆ ರೂಪಿಸಲು ಬಜೆಟ್ ನಲ್ಲಿ ಹಣ ನೀಡಿ: ಮುಖ್ಯಮಂತ್ರಿಗೆ ಮಂಗಳೂರು ನ್ಯಾಯವಾದಿಯ ಪತ್ರ

05/02/2022, 18:16

ಮಂಗಳೂರು( reporterkarnataka.com): ವಿದ್ಯಾರ್ಥಿ ವರ್ಗದಲ್ಲಿ ಸಾಮರಸ್ಯ -ಸಹಬಾಳ್ವೆಗೆ ಪ್ರಯತ್ನಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಬಜೆಟ್ ನಲ್ಲಿ ಹಣ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಬಹಿರಂಗ ಪತ್ರ ಬರೆದಿದ್ದಾರೆ.

ಗೌರವನ್ವಿತ ಮುಖ್ಯಮಂತ್ರಿಗಳೇ, ಇತ್ತೀಚೆಗಷ್ಟೇ ತಾವು ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಗದ್ದುಗೆ ಏರಿ ಯಶಸ್ವಿ ಆರು ತಿಂಗಳನ್ನು ಪೂರೈಸಿದ್ದ ಬಗ್ಗೆ ಸಂಭ್ರಮಾಚರಣೆಯನ್ನು ಮಾಡಿದ್ದೀರಿ.

ಆ ಬಗ್ಗೆ ನಮಗೂ ಸಂತೋಷವಿದೆ. ಕಳೆದ ಕೆಲವು ದಿನಗಳಿಂದ ಉಡುಪಿಯ ಕಾಲೇಜು ಒಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಸಮವಸ್ತ್ರದ ನೆಪ ವೊಡ್ಡಿ ಹಿಜಾಬ್ ಹಾಕಿಕೊಂಡು ಬರಬಾರದು ಎಂದು ತಾಕೀತು ಮಾಡಿ ಆದ್ದೇಶಿಸಿತ್ತು. ಆ ಆದೇಶವನ್ನು ಪಾಲಿಸದೆ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದಾಗ ಅವರನ್ನು ತರಗತಿಗೆ ಹೂಗದಂತೆ ತಡೆ ಹಿಡಿಯಲಾಯಿತು. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಪ್ರತಿಭಟನೆಗೆ ಕುಳಿತು ಕೊಂಡರು. ರಾಜ್ಯ ಹೈಕೋರ್ಟ್  ಬಾಗಿಲು ತಟ್ಟಿ ತಾವು ಧರಿಸುವ ಹಿಜಾಬ್ ತಮ್ಮ ಧಾರ್ಮಿಕ ಹಕ್ಕಿನಲ್ಲಿ ಬರುದರಿಂದ ಅದನ್ನು ವಸ್ತ್ರ ಸಂಹಿತೆ ನಿಯಮಾವಳಿಗಳಿಂದ ಹೊರಗೆ ಇಡಬೇಕೆಂದು ಬೇಡಿಕೆ ಇಟ್ಟರು. ಈ ಸುದ್ದಿ ಕಾಡಗಿಚ್ಚಿನಂತೆ ದೇಶ ವಿದೇಶದ ವರೆಗೂ ತಲುಪಿತು.

ಇದರ ಮಧ್ಯೆ ಇದನ್ನೇ ಅನುಸರಿಸಿದ ಕುಂದಾಪುರದ ಕಾಲೇಜುವೊಂದರ ಆಡಳಿತ ಮಂಡಳಿಯು  ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಗಳನ್ನು ಶಾಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತು.  ಹಿಜಾಬ್ ಹಾಕದೆ ಬಂದಿದ್ದ ವಿದ್ಯಾರ್ಥಿನಿಯರನ್ನು ಆ ಕಾಲೇಜಿನ, ವಿದ್ಯಾರ್ಥಿಗಳಿಗೆ ನೈತಿಕತೆಗಳನ್ನು ಭೋದಿಸುವ ಪ್ರಾಶುಪಾಲರೇ ಸ್ವತಃ ಶಾಲೆಯಿಂದ ಮಕ್ಕಳನ್ನು ಹೊರಗೆ ದೂಡಿ, ಶಾಲೆಯ ಗೇಟ್ ಅನ್ನು ಹಾಕಿರುವ ದೃಶ್ಯಗಳನ್ನು ಟಿವಿ ಮತ್ತು ಇತರ ಮಾಧ್ಯಮಗಳಲ್ಲಿ ನೋಡಿ ಮನಸ್ಸಿಗೆ ಆಘಾತ ವಾಯಿತು. ಇದು ಅಮಾನವೀಯ ಘಟನೆಯಾಗಿದೆ ಎಂದು ನ್ಯಾಯವಾದಿ ಉಳೆಪಾಡಿ ತನ್ನ ಪತ್ರದಲ್ಲಿ ಬರೆದಿದ್ದಾರೆ.

ಪರಿಸ್ಥಿತಿ ಇಷ್ಟಕ್ಕೇ ನಿಲ್ಲದೆ ರಾಜ್ಯದ ಇತರ ಕಾಲೇಜುಗಳ ಆಡಳಿತ ಮಂಡಳಿಗಳು ಇದೇ ರೀತಿಯ ನಿಯಮಾವಳಿಗಳನ್ನು ಹಾಕಿ ಹಿಜಾಬ್ ಹಾಕಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ದಬ್ಬಿದೆ.

ಶಾಲೆಗಳಲ್ಲಿ ಎಲ್ಲರೂ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರವನ್ನೇ ಧರಿಸಿಕೊಂಡು ಬರಬೇಕು  ಮತ್ತು ಆಡಳಿತ ಮಂಡಳಿಯ ಆ ಆದೇಶವನ್ಮು ಪಾಲಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಾಸ್ ಕಳುಹಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳುತ್ತಿದೆ.

ಈ ಎಲ್ಲಾ ಶಾಲೆಗಳ ಆಡಳಿತ ಮಂಡಳಿಯ ಸದಸ್ಯರುಗಳು ಮತ್ತು ಅಧ್ಯಕರುಗಳು ಯಾರು?

ಅವರೆಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು. ಶಾಲೆಗಳಲ್ಲಿ ಹಿಜಾಬ್ ಧರಿಸಿಕೊಂಡು ಬರಬಾರದು ಎಂದು ಶಾಲೆಯ ಪರವಾಗಿ ಆದೇಶ ಹೊರಡಿಸಿದವರು ಯಾರು?

ಶಾಲೆಯ ಆಡಳಿತ ಮಂಡಳಿಯೊಳಗೆ ನುಸುಳಿಕೊಂಡಿರುವ ಇದೇ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರು ಎಂದು ಉಳೆಪಾಡಿ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಶಾಲೆಯಲ್ಲಿ ಯಾವ ರೀತಿ ವಸ್ತ್ರ ಸಂಹಿತೆ ಬೇಕು ಎಂಬ ಬಗ್ಗೆ ಶಾಲೆಯ ಪ್ರಾಂಶುಪಾಲರು ಆದೇಶ ನೀಡುತ್ತಿಲ್ಲ ಅಥವಾ ಶಾಲೆಯಲ್ಲಿ ಯಾವ ರೀತಿಯ ಶಿಸ್ತುಗಳು ಬೇಕೆಂದು ಶಿಕ್ಷಣ ತಜ್ಞರು, ಸಂಶೋಧಕರು, ವಿದ್ವಾಂಸರುಗಳು ಹೇಳುತ್ತಿಲ್ಲ.

ಈ ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ನ ವಿರುದ್ಧ ಸಂಘಟನಾತ್ಮಕವಾದ ಇನ್ನೊಂದು ಕೆಲಸ ನಡೆಯುತ್ತಿದೆ. ಅದೇ ಶಾಲೆಯ ಹುಡುಗರನ್ನು ಕೇಸರಿ ಶಾಲು ಹಾಕಿಸಿ ಕಳುಹಿಸಲಾಗುತ್ತಿದೆ.

ದುರಂತವೆಂದರೆ ನಿನ್ನೆ ಮೊನ್ನೆಯ ವರೆಗೆ ಅದೇ ಶಾಲೆಯಲ್ಲಿ, ಸ್ನೇಹಿತರಂತೆ, ಸಹೋದರ ಸಹೋದರಿಯರಂತೆ ಒಂದೇ ತರಗತಿಯಲ್ಲಿ ಓದುತ್ತಿದ್ದ ಹುಡುಗರು ಇಂದು ಯಾವುದೇ ಮುಲಾಜು ಇಲ್ಲದೆ ಕೇಸರಿ ಶಾಲು ಹಾಕಿಕೊಂಡು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಇವರೆಲ್ಲ 18 ವಯಸ್ಸು ಮೀರದ ಮಕ್ಕಳು. ನಾಳೆ ತಮ್ಮ ಬದುಕನ್ನು, ಸರಕಾರದ ಭವಿಷ್ಯವನ್ನು ನಿರ್ಣಯಿಸುವವರು.

ಶಿಕ್ಷಣ ಸಂಸ್ಥೆ ಇರುವುದು ಮುಗ್ದ ಮಕ್ಕಳನ್ನು ತಿದ್ದಿ, ತೀಡಿ, ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ, ಪರಸ್ಪರ ಸಹೋದರತೆ, ಸಾಮರಸ್ಯ, ಸಹಬಾಳ್ವೆ ಯನ್ನು ಬೆಳೆಸಿ, ಅವರನ್ನು ಉತ್ತಮ ಪ್ರಜೆಯನ್ನಾಗಿ ನಿರ್ಮಿಸಿ ನಾಡಿಗೆ ನೀಡಲಿಕ್ಕಾಗಿ.

ಈ ರೀತಿ ತನ್ನ ಸಹಪಾಠಿಗಳ ಮೇಲೆಯೇ ದ್ವೇಷ ಕಾರುವ ಪ್ರಜೆಗಳನ್ನು ನಿರ್ಮಿಸಿದರೆ ಭವಿಷ್ಯದಲ್ಲಿ ಮುಂದಿನ ಜನಾಂಗ ಸಾಮರಸ್ಯದಿಂದ ಬದುಕಲು ಸಾಧ್ಯವೇ? ಒಗ್ಗಟ್ಟು ಇರಲು ಸಾಧ್ಯವೇ? ಎಂದು ನ್ಯಾಯವಾದಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ನಮಗೆ ಸಮವಸ್ತ್ರ ಮುಖ್ಯವಲ್ಲ, ಹಿಜಾಬ್ ಮುಖ್ಯವಲ್ಲ. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವ ಇನ್ನೊಂದು ಧರ್ಮವನ್ನು ಗೌರವದಿಂದ ಕಾಣುವ ಪ್ರಜೆಗಳ ನಿರ್ಮಾಣದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುವ ಅಧ್ಯಾಪಕರ ಅಗತ್ಯವಿದೆ.

ಅಂತಹ ಸುಶಿಕ್ಷಿತ ವಿದ್ಯಾರ್ಥಿಗಳನ್ನು ನಿರ್ಮಿಸುವ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಅಗತ್ಯವಿದೆ.

ರಾಜರ ಕಾಲದಿಂದಲೂ ಎಲ್ಲಾ ಜನಾಂಗದವರು ಸಾಮರಸ್ಯದಿಂದ ಬದುಕಿ ಬಾಳಿರುವ ಇತಿಹಾಸ ನಮ್ಮ ಕರ್ನಾಟಕಕ್ಕೆ ಇದೆ. ಉತ್ತಮ ಪರಂಪರೆ, ಸಂಸ್ಕೃತಿಗಳನ್ನು ಹಾಕಿ ಈ ನಾಡನ್ನು ಹಿರಿಯರು ನಮ್ಮ ಕೈಗೆ ನೀಡಿದ್ದಾರೆ. ಅದನ್ನು ಬೆಳೆಸಿ ಮುಂದಿನ ಜನಾಂಗಕ್ಕೆ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ.

ಈ ಹಿಂದೆ ಜಸ್ಟಿಸ್ ಎಸ್. ಆರ್. ನಾಯಕ್ ರವರು ಕರ್ನಾಟಕ ಮಾನವ ಹಕ್ಕುಆಯೋಗದ ಅಧ್ಯಕ್ಷರಾಗಿದ್ದ ಸಮಯ ಕರಾವಳಿ ಭಾಗದಲ್ಲಿ ನಿರಂತರ ನಡೆಯುತ್ತಿದ್ದ ಕೋಮು ಸಂಘರ್ಷ ಗಳ ಪ್ರಕರಣಗಳನ್ನು ಅಧ್ಯಯನ ಮಾಡಿ ಸರಕಾರಕ್ಕೆ ಒಂದು ವರದಿಯನ್ನು ಸಲ್ಲಿಸಿರುವ ವಿಚಾರವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈ ವರದಿಯಲ್ಲಿ ಕರಾವಳಿ ಭಾಗದಲ್ಲಿ ಕೋಮು ಸಾಮರಸ್ಯ ಬೆಳೆಸಲು ಸರಕಾರ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ಹಾಕಬೇಕು. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ, ನಿರಂತರ ವಾಗಿ ನಡೆಯಬೇಕು. ಹಾಗಾಗಿ ಸರಕಾರವು ತನ್ನ ಬಜೆಟ್ ನಲ್ಲಿ ಈ ಕಾರ್ಯಕ್ರಮಕ್ಕಾಗಿಯೇ ಪ್ರತ್ಯೇಕವಾದ ಹಣವನ್ನು ಮೀಸಲೀಡಬೇಕು ಎಂದು ಹೇಳಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ಈ ಸಂಘರ್ಷ ಕ್ಕೆ ತಮ್ಮ ಅಧಿಕಾರಾವಧಿಯಲ್ಲಿ ಅಂತಿಮ ಚುಕ್ಕೆ ಬೀಳಬೇಕು. ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿಚಾರದ ಸಂಘರ್ಷಣೆ ಯನ್ನು ಕೂಡಲೇ ನಿಲ್ಲಿಸಿ. ಸಮವಸ್ತ್ರದ ಜೊತೆಗೆ ಹಿಜಾಬ್ ಸಂಬಂಧ ಕಲ್ಪಿಸುವುದು ಸರಿಯಲ್ಲ.

ಹಿಜಾಬ್ ಎಂಬುದು ಶಿರವಸ್ತ್ರ. ಅದು ಮಾನ ಮುಚ್ಚುವ ವಸ್ತ್ರ ಅಲ್ಲ. ಸಮವಸ್ತ್ರಕ್ಕೆ ಸಮಾನ ವಲ್ಲ. ಅಲ್ಲಿ ಒಂದು ಸಮುದಾಯದ ಭಾವನೆ, ಕೌಟುಂಬಿಕ ಪರಿಕಲ್ಪನೆ ಮತ್ತು ಪಾರಂಪರಿಕ ನಂಬಿಕೆಗಳು ಅಡಗಿದೆ.

ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ತಿಳಿಗೊಳಿಸಲು ಸಾಧ್ಯವಿದೆ. ತಾವು ಅವಕಾಶ ನೀಡಿದರೆ ಈ ಬಗ್ಗೆ ಸರಕಾರದೊಂದಿಗೆ ವಿದ್ಯಾರ್ಥಿಗಳ ಮನ ಒಲಿಸುವ ಕಾರ್ಯಕ್ಕೆ ನನ್ನ ಸಮಯವನ್ನು ಮೀಸಲೀಡಲು ಸಿದ್ದನಿದ್ದೇನೆ. ಹಾಗಾಗಿ ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ತಿರಸ್ಕರಿಸಬೇಡಿ.

ಹಿಜಾಬ್ ನ ಸ್ಪಷ್ಟತೆಯ ಬಗ್ಗೆ ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ  ನಿರ್ದೇಶನವನ್ನು ನೀಡಿ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಮಾನರೀತಿಯ ಶಿಕ್ಷಣದ ಅವಕಾಶವನ್ನು ನೀಡಬೇಕಾಗಿ ಕೋರುತ್ತೇನೆಂದು ದಿನೇಶ್ ಹೆಗ್ಡೆ ಉಳೆಪಾಡಿ ಪತ್ರದಲ್ಲಿ ತಿಳಿಸಿದ್ದಾರೆ.

ಜತೆಗೆ ಈ ಪತ್ರದ ಪ್ರತಿಯನ್ನು ಪ್ರತಿಪಕ್ಷದ ನಾಯಕರಿಗೂ ಕಳುಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು