ಇತ್ತೀಚಿನ ಸುದ್ದಿ
ವಯನಾಡು: ಭಾರೀ ಭೂಕುಸಿತ, ಜಲ ಪ್ರವಾಹ; 4 ಗ್ರಾಮಗಳು ಸಂಪೂರ್ಣ ನಾಶ; ಕನಿಷ್ಠ 47 ಮಂದಿ ಸಾವು
30/07/2024, 17:47
ವಯನಾಡು(reporterkarnataka.com): ನೆರೆಯ ಕೇರಳದ ವಯನಾಡಿನ ಮುಂಡಕ್ಕೈ ಮತ್ತು ಚುರಲ್ಮಲಾ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, 4 ಗ್ರಾಮಗಳು ಅಕ್ಷರಶಃ ಸಂಪೂರ್ಣ ಮಣ್ಣಿನಡಿಗೆ ಸಿಲುಕಿವೆ. ದುರಂತದಲ್ಲಿ ಕನಿಷ್ಠ 47 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 250ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.







ವಯನಾಡಿನಲ್ಲಿ ತಡರಾತ್ರಿ ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮುಂಡಕ್ಕೈ, ಚುರಲ್ಮಲಾ, ಅಟ್ಟಮಾಲಾ, ನೂಲ್ಪುಝಾದಲ್ಲಿ ಭೂಕುಸಿತ ಹಾಗೂ ಪ್ರವಾಹದಲ್ಲಿ ಮನುಷ್ಯ ಹಾಗೂ ಜಾನುವಾರುಗಳ ಮೃತದೇಹಗಳು ತೇಲಿ ಹೋಗುತ್ತಿವೆ. ಸುಮಾರು 400ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗಾಯಗೊಂಡ 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚುರಲ್ಮಲಾ ಪ್ರದೇಶದಲ್ಲಿ ಸುಮಾರು 250 ಕುಟುಂಬಗಳಿವೆ. ರಾತ್ರಿ 2 ಗಂಟೆ ಸುಮಾರಿಗೆ ಇಲ್ಲಿ ಭೂ ಕುಸಿತ ಉಂಟಾಗಿದೆ. ಮುಂಡಕ್ಕೈ, ಚುರಲ್ಮಲಾ, ಅಟ್ಟಮಾಲಾ, ನೂಲ್ಪುಝಾದಲ್ಲಿ ರಾತ್ರಿ 1 ಗಂಟೆ ನಂತರ 4 ಬಾರಿ ಭೀಕರ ಭೂ ಕುಸಿತವಾಗಿದೆ. 4 ಗ್ರಾಮಗಳು ಅಕ್ಷರಶಃ ಸಂಪೂರ್ಣ ನಾಶವಾಗಿವೆ.
ವಯನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ ಸೇನೆಯ ಹೆಲಿಕಾಪ್ಟರ್‌ಗಳು ಪ್ರತೀಕೂಲ ಹವಾಮಾನದಿಂದ ಲ್ಯಾಂಡ್ ಮಾಡಲಾಗದೆ ಹಿಂತಿರುಗಿವೆ. ಮುಂಡಕ್ಕೈ ಮದರಸಾ ಬಳಿ 150ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳು ಮಣ್ಣಿನಡಿ ಸಿಲುಕಿವೆ.
ಚಾಲಿಯಾರ್ ಎಂಬ ನದಿಗೆ ಅಡ್ಡಲಾಗಿದ್ದ ಸೇತುವೆ ನೆಲಸಮವಾಗಿದೆ.
ಪರಿಣಾಮ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ.
ನದಿಯಲ್ಲಿ ತೇಲಿಬಂದ ಶವಗಳು
ಪ್ರದೇಶದಲ್ಲಿ ಹರಿಯುವ ಚಾಲಿಯಾರ್ ನದಿಯ ರಭಸ ಜೋರಾಗಿದೆ. ನೀರಿನ ರಭಸಕ್ಕೆ ಮರ, ಮನೆಗಳು ಕೊಚ್ಚಿ ಹೋಗಿವೆ. ಎನ್ ಡಿಆರ್ ಎಫ್ ತಂಡ ಶವಗಳನ್ನ ಮೇಲಕ್ಕೆತ್ತುವ ಕಾರ್ಯದಲ್ಲಿ ತೊಡಗಿವೆ.














