12:09 PM Sunday19 - October 2025
ಬ್ರೇಕಿಂಗ್ ನ್ಯೂಸ್
ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್ ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ

ಇತ್ತೀಚಿನ ಸುದ್ದಿ

ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ಡಾ.ಮಂತರ್ ಗೌಡ

19/10/2025, 11:01

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail com

ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಮರುದಿನ ಹಾರಂಗಿ ಜಲಾಶಯದ ಕ್ರೆಸ್ಟ್‍ಗೇಟ್ ಬಳಿ ಇರುವ ತಾಯಿ ಕಾವೇರಿ ಮಾತೆ ಪ್ರತಿಮೆಗೆ ಶಾಸಕ ಡಾ.ಮಂತರ್ ಗೌಡ ಅವರು ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದರು.
ಈ ಬಾರಿ ಮೇ 3ನೇ ವಾರದಿಂದಲೇ ಮಳೆ ಆರಂಭವಾಗಿದ್ದು, ಹಾರಂಗಿ ಜಲಾಶಯ ಇಂದಿಗೂ ಸಹ ಭರ್ತಿಯಾಗಿರುವ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಬಳಿಕ ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಶಾಲೂ ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು ಪ್ರತೀ ವರ್ಷದಂತೆ ಈ ವರ್ಷವೂ ಸಹ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ನಂತರ ಹಾರಂಗಿ ಜಲಾಶಯದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ವಿತರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘದ ಅಧ್ಯಕ್ಷರು, ನಿರ್ದೇಶಕರು, ಕೃಷಿಕರು ಸೇರಿದಂತೆ ಹಲವರನ್ನು ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಬಾರಿ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಾರಂಗಿ ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ಶೀತದಿಂದ ಕೂಡಿ ಬೆಳೆಗಳು ಸಹ ಹಾನಿಯಾಗಿದೆ. ಆದರೂ ಸಹ ಜಿಲ್ಲೆಗೆ ಒಳ್ಳೆಯ ಮಳೆಯಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೃಷಿಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 95 ಕೋಟಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳು ಡಿಸೆಂಬರ್ ಅಥವಾ ಜನವರಿಯಲ್ಲಿ ಚಾಲನೆಗೊಳ್ಳಲಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದರು.
‘50 ಕೋಟಿ ರೂ. ವೆಚ್ಚದಲ್ಲಿ 18 ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗುವುದು. ಹಾಗೆಯೇ 36.50 ಕೋಟಿ ರೂ. ವೆಚ್ಚದಲ್ಲಿ ‘ಬೌನ್‍ಸ್ಟ್ರಿಂಗ್ ಬ್ರಿಡ್ಜ್’ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಗುಡ್ಡೆಹೊಸೂರಿನಿಂದ ಹುದುಗೂರು ಮಾರ್ಗದ 5 ಕಿ.ಮೀ. ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ಹಾಗೆಯೇ ಚಿಕ್ಲಿಹೊಳೆ ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಅವರು ವಿವರಿಸಿದರು.’
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಿಂದ ಹಾರಂಗಿ ಜಲಾಶಯ ಕಚೇರಿ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೂ ಮುಂದಾಗಲಾಗಿದೆ ಎಂದು ಶಾಸಕರು ಹೇಳಿದರು.
ಹಾರಂಗಿ ಎಡದಂಡೆ ನಾಲೆಯ 6.85 ಕಿ.ಮೀ.ನಿಂದ 14.75 ಕಿ.ಮೀ.ವರೆಗೆ 72 ಕೋಟಿ ರೂ. ಮುಖ್ಯನಾಲೆಯನ್ನು ಆಧುನೀಕರಣ ಕಾಮಗಾರಿಯು ಈಗಾಗಲೇ ಆರಂಭವಾಗಿದೆ ಎಂದು ನುಡಿದರು.


‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಆ ದಿಸೆಯಲ್ಲಿ ಡಿಸೆಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹಾರಂಗಿ ಜಲಾಶಯ ಬಳಿಯ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚಿಕ್ಲಿಹೊಳೆ ರಸ್ತೆ ಅಭಿವೃದ್ಧಿಗೆ ಒಟ್ಟಾರೆ 95 ಕೋಟಿ ರೂ.ಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಹಾರಂಗಿ ಜಲಾಶಯವನ್ನು ಉಳಿಸಬೇಕು. ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಹಾರಂಗಿ ಜಲಾಶಯ ಪಾತ್ರದಲ್ಲಿ ಮಹಶೀರ್ ಮೀನು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು. ರಾಸಾಯನಿಕಗಳನ್ನು ಮಿಶ್ರಣ ಮಾಡಿ ನದಿಗೆ ಹರಿಸಬಾರದು ಎಂದು ಕೋರಿದರು.
ಹಾರಂಗಿ ಜಲಾಶಯ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್, ಗುಂಡೂರಾವ್, ಅಂದಿನ ನೀರಾವರಿ ಸಚಿವರಾದ ನಂಜೇಗೌಡರ ಶ್ರಮ ಇದ್ದು, ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಾಗುವುದು. ಆ ನಿಟ್ಟಿನಲ್ಲಿ ರೈತರು ಕೈಜೋಡಿಸಬೇಕು ಎಂದರು.
ಹಾರಂಗಿ ಜಲಾಶಯ ನದಿ ಪಾತ್ರ ಗರಗಂದೂರು ಮತ್ತಿತರ ಕಡೆಗಳಲ್ಲಿ ಹೂಳು ತೆಗೆಯುವ ಕಾರ್ಯ ಮಾಡಲಾಗುವುದು. ಜೊತೆಗೆ ಗಿಡ ಗಂಟೆಗಳನ್ನು ಕಡಿಯುವ ಕೆಲಸವಾಗಬೇಕು. ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ಡಾ.ಮಂತರ್ ಗೌಡ ಅವರು ತಿಳಿಸಿದರು.
ಹಾರಂಗಿ ಜಲಾಶಯದ ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಚೌಡೇಗೌಡ ಅವರು ಮಾತನಾಡಿ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ 5 ತಾಲ್ಲೂಕುಗಳು ಬರಲಿದ್ದು, ಈ ವ್ಯಾಪ್ತಿಗೆ ಹೆಚ್ಚಿನ ಅನುದಾನ ಒದಗಿಸಿ ಹೂಳು ತೆಗೆಯುವಂತಾಗಬೇಕು ಎಂದು ಕೋರಿದರು.
ಹಾರಂಗಿ ಜಲಾಶಯ ಅಧೀಕ್ಷಕ ಎಂಜಿನಿಯರ್ ಸತೀಶ್ ಅವರು ಮಾತನಾಡಿ ಜಲಾಶಯದಿಂದ ಒಟ್ಟು ನೀರಿನ ಸಂಗ್ರಹಣಾ ಸಾಮಥ್ರ್ಯ 8.50 ಟಿಎಂಸಿ ಆಗಿದ್ದು, ಇದರಲ್ಲಿ 8.073 ಟಿಎಂಸಿ ನೀರನ್ನು ಉಪಯೋಗಿಸಬಹುದಾಗಿದೆ. ಹಾರಂಗಿ ಜಲಾಶಯವು ಮಣ್ಣಿನ ಏರಿ, ಕಲ್ಲು ಕಟ್ಟಡ ಹಾಗೂ ಕಾಂಕ್ರೀಟ್ ಕಟ್ಟಡದಿಂದ ಕೂಡಿರುತ್ತದೆ. ಜಲಾಶಯದ ಉದ್ದ 845.82 ಮೀ., ಎತ್ತರ 53 ಮೀ., ಹಾಗೂ ಸಮುದ್ರ ಮಟ್ಟದಿಂದ 2859 ಅಡಿಗಳು ಎತ್ತರದಲ್ಲಿದೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರಾದ ಐ.ಕೆ.ಪುಟ್ಟಸ್ವಾಮಿ ಮಾಹಿತಿ ನೀಡಿ ಹಾರಂಗಿ ಜಲಾಶಯವು ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ಹಾಸನ ಜಿಲ್ಲೆಯ ಅರಕಲಗೂಡು, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ 1,34,895 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಇದರಲ್ಲಿ ಎರಡು ಏತ ನೀರಾವರಿ ಒಳಗೊಂಡಿದೆ ಎಂದು ತಿಳಿಸಿದರು.
1984 ರಿಂದ ಕಾವೇರಿ ಉತ್ಸವವನ್ನು ನೆರವೇರಿಸುತ್ತಿದ್ದು, ತಲಕಾವೇರಿಯಿಂದ ಪ್ರತೀ ವರ್ಷವೂ ಪುಣ್ಯ ತೀರ್ಥವನ್ನು ತಂದು ಪೂಜಿಸಿ ಮರುದಿನ ಹಾರಂಗಿ ಜಲಾಶಯ ಬಳಿ ಇರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ತೀರ್ಥ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದೆ ಎಂದು ಹೇಳಿದರು.
ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಂಜಿನಿಯರ್ ಗಳಾದ ಕುಸುಕುಮಾರ್, ಮಂಜುನಾಥ್, ಎಇಇ ರಾಜೇಂದ್ರ ಕುಮಾರ್, ಸಹಾಯಕ ಎಂಜಿನಿಯರ್‍ಗಳಾದ ಸೌಮ್ಯ ರಾಜು, ಸಂದ್ಯಾ, ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು