11:03 AM Thursday6 - November 2025
ಬ್ರೇಕಿಂಗ್ ನ್ಯೂಸ್
Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ವೈಜಾಗ್ ಸ್ಟೀಲ್ (RINl) ಭವಿಷ್ಯದ ಯೋಜನೆ: ಕೇಂದ್ರ ಸಚಿವ ಕುಮಾರಸ್ವಾಮಿ; ಎಚ್ ಡಿಕೆಯ ಭೇಟಿಯಾದ ಆಂಧ್ರ ಸಚಿವ ನಾ.ರಾ.ಲೋಕೇಶ್

05/02/2025, 19:29

*₹11,440 ಕೋಟಿ ಪುನಶ್ಚೇತನ ಪ್ಯಾಕೇಜ್ ಬಗ್ಗೆ ಚರ್ಚೆ*

*ನವದೆಹಲಿಯ ಮಾಜಿ ಪ್ರಧಾನಿಗಳ ಮನೆಯಲ್ಲಿ ಭೇಟಿ; ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಲೋಕೇಶ್*

ನವದೆಹಲಿ(reporterkarnataka.com): ಕೇಂದ್ರ ಸರಕಾರವು ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ (RINl) ಪುನಶ್ಚೇತನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಐಟಿ ಸಚಿವ ನಾ.ರಾ.ಲೋಕೇಶ್ ಅವರು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾದ ಲೋಕೇಶ್ ಅವರು ವೈಜಾಗ್ ಸ್ಟೀಲ್ ಪುನಶ್ಚೇತನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ ಅವರು ಬಹುಮುಖ್ಯವಾಗಿ ವೈಜಾಗ್ ಸ್ಟೀಲ್ ಪುನಶ್ಚೇತನ ಯೋಜನೆ ಹಾಗೂ ಭವಿಷ್ಯದಲ್ಲಿ ಕಾರ್ಖಾನೆಯನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಸಬೇಕು ಎಂಬ ಬಗ್ಗೆ ಸವಿಸ್ತಾರವಾಗಿ ಸಮಾಲೋಚನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ನಿಗದಿ ಮಾಡಿದ್ದು, ಅದರಂತೆ ನಾವು ಉಕ್ಕು ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕಿದೆ. ಅದರಲ್ಲಿಯೂ ಪರಿಸರ ಪೂರಕವಾದ ಗ್ರೀನ್ ಸ್ಟೀಲ್, ಸ್ಪೆಶಾಲಿಟಿ ಸ್ಟೀಲ್ ತಯಾರಿಕೆಯಲ್ಲಿ ಭಾರತ ಮುಂಚೂಣಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ವೈಜಾಗ್ ಸ್ಟೀಲ್ ಗೆ ಶಕ್ತಿ ತುಂಬಲು ಕೇಂದ್ರ ಸರಕಾರ ನಿರ್ಧರಿಸಿತು ಎಂದು ಲೋಕೇಶ್ ಅವರಿಗೆ ಸಚಿವರು ಹೇಳಿದರು.
ಪ್ಯಾಕೇಜ್ ಪರಿಣಾಮಕಾರಿ ಬಳಕೆ ಹಾಗೂ ನಿಗದಿತ ಗುರಿಯಂತೆ ಕಾರ್ಖಾನೆಯ ಮೂರು ಬ್ಲಾಸ್ಟ್ ಫರ್ ನೆಸ್ (ಊದು ಕುಲುಮೆ)ಗಳ ಮೂಲಕ ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ತಯಾರು ಮಾಡುವುದು ಕೇಂದ್ರದ ಗುರಿಯಾಗಿದೆ. ಈ ಗುರಿ ಸಾಧನೆಗೆ ಆಂಧ್ರ ಪ್ರದೇಶದ ಸರಕಾರ ಹಾಗೂ ಕಾರ್ಮಿಕರ ಸಹಕಾರ ಅತ್ಯಗತ್ಯವಾಗಿ ಬೇಕಿದೆ ಎಂದು ಸಚಿವರು ಲೋಕೇಶ್ ಅವರಲ್ಲಿ ಒತ್ತಿ ಹೇಳಿದರು.
ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರಕಾರದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಲೋಕೇಶ್ ಅವರು ಕೇಂದ್ರ ಸಚಿವರಿಗೆ ಭರವಸೆ ನೀಡಿದರು.


ಕಾರ್ಖಾನೆಯ ಪುನಶ್ಚೇತನ ವಿಷಯದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೋರಿದ ಬದ್ಧತೆಯ ಶ್ಲಾಘಿಸಿದ ಕೇಂದ್ರ ಸಚಿವರು, ತಮ್ಮ ಸಚಿವಾಲಯಗಳ ವತಿಯಿಂದ ಆಂಧ್ರ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ಲೋಕೇಶ್ ಅವರಿಗೆ ಹೇಳಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು ಹಾಗೂ ಲೋಕೇಶ್ ಅವರು ಸಮಾಲೋಚನೆ ನಡೆಸಿದರು. ತದ ನಂತರ ಮಾಜಿ ಪ್ರಧಾನಿ ದೇವೇಗೌಡರ ಜತೆಯಲ್ಲಿ ಎಲ್ಲರೂ ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಲೋಕೇಶ್, ರಾಮ್ ಮೋಹನ್ ನಾಯ್ಡು ಸೇರಿದಂತೆ ಎಲ್ಲ ಸಂಸದರನ್ನು ಮಾಜಿ ಪ್ರಧಾನಿಗಳು ಹಾಗೂ ಸಚಿವರು ಆತ್ಮೀಯವಾಗಿ ಸತ್ಕರಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ.ಎನ್.ಮಂಜುನಾಥ್, ಕೋಲಾರ ಸಂಸದ ಮಲ್ಲೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು