ಇತ್ತೀಚಿನ ಸುದ್ದಿ
ಉತ್ತರ ಪ್ರದೇಶ; ಸಚಿವರು ಹೊಟೇಲ್‌ಗಳಲ್ಲಿ ತಂಗುವಂತಿಲ್ಲ, ಅಧಿಕಾರಿಗಳಿಗೆ 30 ನಿಮಿಷಗಳಿಗೂ ಹೆಚ್ಚು ಲಂಚ್ ಬ್ರೇಕ್ ಇಲ್ಲ
15/04/2022, 10:50
ಲಕ್ನೋ (reporterkarnataka.com): ಸಚಿವರು ಇನ್ನು ಮುಂದೆ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ತೆರಳುವಾಗ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವ ಬದಲು ಗೆಸ್ಟ್ ಹೌಸ್‌ಗಳಲ್ಲಿ ಉಳಿದುಕೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಯೋಗಿ ಆದಿತ್ಯನಾಥ್ ತಮ್ಮ ನಿವಾಸದಲ್ಲಿ ನಡೆದ 9ನೇ ತಂಡದ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ಸರ್ಕಾರಿ ಅಧಿಕಾರಿಗಳು ಕಚೇರಿ ಕೆಲಸಗಳ ಸಂದರ್ಭದಲ್ಲಿ ಹೆಚ್ಚು ಸಮಯವನ್ನು ಊಟದಲ್ಲಿಯೇ ಕಳೆಯುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಊಟದ ವಿರಾಮ 30 ನಿಮಿಷ ಮೀರದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಮಧ್ಯಾಹ್ನ 1:30 ರಿಂದ 2:00 ಗಂಟೆಯವರೆಗೆ ಊಟದ ವಿರಾಮ ಇರುತ್ತದೆ. ಆದರೆ ಕೆಲವರು ಊಟದ ವಿರಾಮವನ್ನು ಹೆಚ್ಚು ಸಮಯ ತೆಗೆದುಕೊಂಡು ಬಳಿಕ ತಮ್ಮ ಕಚೇರಿಗಳಿಗೆ ಹಿಂತಿರುಗುತ್ತಾರೆ. ಹೀಗಾಗಿ ಎಲ್ಲರೂ 30 ನಿಮಿಷಗಳ ಊಟದ ವಿರಾಮವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ನೌಕರರು ಸರಿಯಾದ ಸಮಯಕ್ಕೆ ಹಾಜರಿರಬೇಕು. ಒಂದು ವೇಳೆ ತಡವಾಗಿ ಕಚೇರಿಗೆ ಬಂದಲ್ಲಿ ಅವರನ್ನು ಸ್ವೀಕರಿಸಲಾಗುವುದಿಲ್ಲ. ಹಿರಿಯ ಅಧಿಕಾರಿಗಳು ನಿತ್ಯ ಕಚೇರಿಗಳಲ್ಲಿ ದಿಢೀರ್ ತಪಾಸಣೆ ನಡೆಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಇದರೊಂದಿಗೆ ಸಾರ್ವಜನಿಕರು ನೀಡುವ ದೂರುಗಳ ಬಗ್ಗೆ ತಕ್ಷಣವೇ ಗಮನಹರಿಸಬೇಕು. ಯಾವುದೇ ಕಡತಗಳು 3 ದಿನಗಳಿಗೂ ಹೆಚ್ಚು ದಿನ ಬಾಕಿಯಿಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆಪ್ತ ಸಹಾಯಕರನ್ನಾಗಿ ಸಂಬಂಧಿಗಳನ್ನು ನೇಮಕ ಮಾಡಬೇಡಿ ಎಂದು ಸಂಪುಟದ ಮಂತ್ರಿಗಳಿಗೆ ಯೋಗಿ ಸೂಚಿಸಿದ್ದಾರೆ.
ಸರ್ಕಾರಿ ಕೆಲಸಗಳು ತಡವಾಗಿ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈ ಕ್ರಮವನ್ನು ಕೈಗೊಂಡಿದ್ದಾರೆ.