ಇತ್ತೀಚಿನ ಸುದ್ದಿ
ಯು.ಟಿ. ಖಾದರ್ ಗೆ ಸ್ಪೀಕರ್ ಸ್ಥಾನ: ಕೈ ಪಾಳಯದ ಒಳವರ್ಮ ಏನು? ಯಾಕಿದು ಅಚ್ಚರಿಯ ನಿರ್ಧಾರ?
23/05/2023, 11:20

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಹೆಸರು ಅಂತಿಮವಾಗಿದೆ. ಪ್ರತಿಪಕ್ಷದ ಉಪ ನಾಯಕರಾಗಿ ಉಪ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿರುವ ಖಾದರ್ ಅವರಿಗೆ ಡಿಸಿಎಂಗಿಂತಲೂ ದೊಡ್ಡ ಸ್ಥಾನ ಲಭಿಸಿದೆ.
ಸಾಮಾನ್ಯವಾಗಿ ಸ್ಪೀಕರ್ ಹುದ್ದೆಯನ್ನು ಯಾವ ಹಿರಿಯ ಸದಸ್ಯರೂ ಒಪ್ಪಿಕೊಳ್ಳುವುದಿಲ್ಲ. ವಯೋವೃದ್ಧ ನಾಯಕರು ಕೂಡ ಈ ಉನ್ನತ ಹುದ್ದೆಯನ್ನು
ಒಪ್ಪಿಕೊಳ್ಳುವುದಿಲ್ಲ. ಕಾರಣ, ಮೊದಲನೆಯದಾಗಿ ಸ್ಪೀಕರ್ ಆದವರು ಆ ಅವಧಿಯಲ್ಲಿ ರಾಜಕೀಯವಾಗಿ ಮೂಲೆ ಗುಂಪು ಆಗುತ್ತಾರೆ. ಸ್ಪೀಕರ್ ಸ್ಥಾನ ಪಕ್ಷಾತೀತವಾದದ್ದು, ಸ್ಪೀಕರ್ ಆದವರು ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಪಕ್ಷದ ಕಚೇರಿಗೆ ಭೇಟಿ ನೀಡುವಂತಿಲ್ಲ. ಸಭೆ- ಸಮಾರಂಭಗಳಲ್ಲಿ ಕಾಣ ಸಿಗುವುದು ಬಹಳ ಅಪರೂಪ. ಇದೆಲ್ಲ ಇಬ್ಬ ನಾಯಕನ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಎರಡನೇ ಕಾರಣ, ಸದನದಲ್ಲಿ ಕಲಾಪ ನಡೆಸುವುದು ಅಷ್ಟು ಸುಲಭದ ವಿಷಯವಲ್ಲ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಯಾವುದೇ ತಾರತಮ್ಯ ಇಲ್ಲದೆ ನಿರ್ವಹಿಸಿಕೊಂಡು ಹೋಗಬೇಕು. ಮತ್ತೊಂದು ವಿಷಯವೆಂದರೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸ್ಪೀಕರ್ ಅವರಿಗೆ ಓಟು ಹಾಕುವ ಹಕ್ಕು ಇಲ್ಲ. ಎಲ್ಲಾದರು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮತ ಸಮಾನವಾದರೆ ಮಾತ್ರ ಸ್ಪೀಕರ್ ಅವರಿಗೆ ಮತ ಹಾಕುವ ಅಧಿಕಾರ ಪ್ರಾಪ್ತಿಯಾಗುತ್ತದೆ.
ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಸ್ಪೀಕರ್ ಹುದ್ದೆಯನ್ನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತವೆ. ಒಂದು ಹಿರಿಯ ಮುತ್ಸದ್ದಿ ಸದಸ್ಯನ ಅನುಭವವನ್ನು ರಾಜ್ಯದ ಜನತೆಗೆ ನೀಡುವುದು, ಇನ್ನೊಂದು ಒಬ್ಬ ಪ್ರಬಲ
ನಾಯಕನನ್ನು ರಾಜಕೀಯವಾಗಿ ಹತ್ತಿಕ್ಕುವುದು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಇನ್ನೊರ್ವ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸ್ಪೀಕರ್ ಹುದ್ದೆ ನೀಡಿ ಅವರನ್ನು ನಿಯಂತ್ರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಇದೀಗ ಖಾದರ್ ವಿಷಯಕ್ಕೆ ಬಂದರೆ ಕಳೆದ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕನಾಗಿದ್ದ ಖಾದರ್ ಅವರು ಉಪ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದವರು. ಜಾತಿವಾರು ಲೆಕ್ಕಾಚಾರ, ಪ್ರಾದೇಶಿಕತೆ, ಪ್ರಾಬಲ್ಯ ಮುಂತಾದ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವಾಗ ಡಿಸಿಎಂ ಹುದ್ದೆ ಖಾದರ್ ಅವರಿಗೆ ಸಿಗುವುದು ಸುಲಭದ ವಿಷಯವಲ್ಲದಿದ್ದರೂ ಆಯಕಟ್ಟಿನ ಖಾತೆ ಅವರಿಗೆ ಲಭಿಸಬೇಕಿತ್ತು. ಆದರೆ ಅವರಿಗೆ ಇದೀಗ ಸ್ಪೀಕರ್ ಸ್ಥಾನವನ್ನು ಪಕ್ಷ ನೀಡಲಿದೆ. ಖಾದರ್ ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಈ ಸಲ ಉತ್ತಮ ಸಾಧನೆಯನ್ನು ತೋರಿಸಿದರೂ ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇಡೀ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದರೂ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವಿಜಯದ ನಗೆ ಹೊರಸೂಸಿದೆ. ಅದಲ್ಲದೆ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರೆ. ರಾಜಕೀಯವಾಗಿ ಲೆಕ್ಕಾಚಾರ ಹಾಕುವಾಗ ಪ್ರತಿಪಕ್ಷದ ಉಪ ನಾಯಕ ಸ್ಥಾನದಲ್ಲಿದ್ದ ಖಾದರ್ ಅವರಿಗೆ ಇದು ಸ್ವಲ್ಪ ಮಟ್ಟಿನ ಹಿನ್ನಡೆ ಎನ್ನಲಾಗುತ್ತಿದೆ. ಅದಲ್ಲದೆ ಜಿಲ್ಲೆಯಿಂದ ಇನ್ನೊರ್ವ ಮುಖಂಡನನ್ನು ನಾಯಕನಾಗಿ ಬೆಳೆಸಬೇಕಾದರೆ ಖಾದರ್ ಅವರ ವೇಗವನ್ನು ತಡೆಗಟ್ಟುವುದು ಕಾಂಗ್ರೆಸ್ ಗೆ ಅನಿವಾರ್ಯವಾಗುತ್ತದೆ.