ಇತ್ತೀಚಿನ ಸುದ್ದಿ
ಉತ್ಸವಕ್ಕೆ ಮುಖ ತೋರಿಸದ ಮುಖ್ಯಮಂತ್ರಿ: ಬಹುಸಂಸ್ಕೃತಿಯ ಮರೆತರೇ ಸಿಎಂ ಸಿದ್ದರಾಮಯ್ಯರು?
18/01/2025, 11:12
ಮಂಗಳೂರು(reporterkarnataka.com): ಇದು ಬಹು ಸಂಸ್ಕೃತಿ ಉತ್ಸವದ ಕರುಣಾಜನಕ ಕತೆ. ಮುಖ್ಯಮಂತ್ರಿಗಳಿಗಾಗಿ ಮೂರು ಬಾರಿ ಮುಂದೂಡಲ್ಪಟ್ಟ ಕಾರ್ಯಕ್ರಮ ಸಿಎಂ ಮಂಗಳೂರಿನಲ್ಲೇ ಇದ್ದರೂ ಕೊನೆಗೂ ಅವರ ಗೈರು ಹಾಜರಿಯಲ್ಲಿ ನಡೆಯಿತು.
ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಮತ್ತು
ಯಕ್ಷಗಾನ ಅಕಾಡೆಮಿ ವತಿಯಿಂದ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಬಹು ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಅವರಿಂದ ಉದ್ಘಾಟನೆಗೆ ಸಮಯ ನಿಗದಿ ಮಾಡಲಾಗಿತ್ತು. ಸಿಎಂ ಅವರ ಅಧಿಕೃತ ಕಾರ್ಯಕ್ರಮದ ಪಟ್ಟಿಯಲ್ಲೂ ಇದು ಸೇರಿತ್ತು. ಬೆಳಗ್ಗೆ 10 ಗಂಟೆಯಿಂದಲೇ ಎಲ್ಲ ಅಕಾಡೆಮಿಯ ಅಧ್ಯಕ್ಷರು ಶೃಂಗರಿಸಿಕೊಂಡು ಬಂದಿದ್ದರು. ಪುರಭವನದ ಹೊರಗಡೆ ಬೆಳಗ್ಗೆ 10 ಗಂಟೆಯಿಂದ ಬ್ಯಾಂಡ್ ಸೆಟ್ ನವರು ನಾದ ಹೊರಡಿಸುತ್ತಿದ್ದರು. ಎಲ್ಲ ಅಕಾಡೆಮಿಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಮದುವೆ ಮನೆಯಲ್ಲಿ ಓಡಾಡುವ ರೀತಿಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಕಳೆದು 2 ಗಂಟೆಯಾದರೂ ಸಿಎಂ ಬರಲೇ ಇಲ್ಲ. ಇನ್ನೇನು ಸಂಜೆ ಬರಬಹುದು ಎಂದು ಅಕಾಡೆಮಿ ಅಧ್ಯಕ್ಷರುಗಳು ಖುಷಿಯಲ್ಲಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ನಿರ್ಗಮಿಸುವ ವರೆಗೂ ಪುರಭವನದತ್ತ ಕಾಲು ಹಾಕಲೇ ಇಲ್ಲ. ವೇದಿಕೆಗಳಲ್ಲಿ ಬಹು ಸಂಸ್ಕೃತಿಯ ಬಗ್ಗೆ ಆಗಾಗ ಮಾತನಾಡುವ ಸಿದ್ದರಾಮಯ್ಯ ಅವರು ಬಹು ಸಂಸ್ಕೃತಿ ಉತ್ಸವದ ಉದ್ಘಾಟನೆ ಬಿಡಿ, ಕನಿಷ್ಠ ಪಕ್ಷ ಮುಖ ಕೂಡ ತೋರಿಸದಿರುವುದಕ್ಕೆ ಕಾರಣ ನಿಜಕ್ಕೂ ನಿಗೂಢವಾಗಿದೆ.