ಇತ್ತೀಚಿನ ಸುದ್ದಿ
ಉರ್ವಾ ಮಾರುಕಟ್ಟೆ ಕಟ್ಟಡ ಪಾಲಿಕೆ ತೆಕ್ಕೆಗೆ: ಹಸ್ತಾಂತರ ಪ್ರಕ್ರಿಯೆಗೆ ರಾಜ್ಯ ಸರಕಾರ ಒಪ್ಪಿಗೆ
19/07/2022, 17:14
ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರಪಾಲಿಕೆಗೆ ಹಸ್ತಾಂತರಿಸಲು ಸರಕಾರ ಅನುಮೋದನೆ ನೀಡಿದೆ.
ಮುಡಾದಿಂದ ಮನಪಾಕ್ಕೆ ಹಸ್ತಾಂತರಿಸುವ ಬಗ್ಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆ, ಶಾಸಕರ ಅಧ್ಯಕ್ಷತೆಯ ಸಮಿತಿ ಸಭೆ, ಮನಪಾ ಆಯುಕ್ತರು, ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ, ಪೌರಾಡಳಿತ ನಿರ್ದೇಶಕರ ಪತ್ರದಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದನ್ನೆಲ್ಲ ಪರಿಗಣಿಸಿದ ರಾಜ್ಯ ಸರಕಾರ ಕೆಲವೊಂದು ಷರತ್ತುಗಳನ್ನು ನೀಡಿ ಅನುಮೋದನೆ ನೀಡಿದೆ.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಈ ನಿಟ್ಟಿನಲ್ಲಿ ಕಳೆದ ಕೆಲವು ಸಮಯಗಳಿಂದ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಸಾಧಕ, ಬಾಧಕಗಳನ್ನು ಪರಿಗಣಿಸಿ ಸರಕಾರ ಈಗ ಅಂತಿಮ ನಿರ್ಧಾರಕ್ಕೆ ಬಂದಿದೆ. ಸರಕಾರದ ಈ ನಿರ್ಧಾರದಿಂದ ಪಾಲಿಕೆ ಸುಪರ್ಧಿಯಲ್ಲಿ ಮಾರುಕಟ್ಟೆ ಸಂಕೀರ್ಣದ ಸದ್ಬಳಕೆ ಮಾಡಲು ಪಾಲಿಕೆಗೆ ಸಂಪೂರ್ಣ ಅಧಿಕಾರ ಸಿಕ್ಕಂತಾಗಲಿದೆ.
ಷರತ್ತುಗಳು ಏನೇನು?: ಪ್ರಸ್ತಾಪಿತ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಪ್ರಸ್ತಾವನೆಯಲ್ಲಿ ಕೋರಿರುವಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14,37,40,917ಕೋಟಿ ರೂ. ಖರ್ಚು ಮಾಡಲಾಗಿದ್ದು, ಇದನ್ನು ಮಹಾನಗರಪಾಲಿಕೆ ಹಸ್ತಾಂತರಿಸಬೇಕು. ಈ ಹಣದ ಕ್ರೋಢೀಕರಣಕ್ಕಾಗಿ ಬ್ಯಾಂಕಿನಿಂದ ಸಾಲವನ್ನು ಪಡೆಯುವ ಅಗತ್ಯವಿದ್ದಲ್ಲಿ ಪಾಲಿಕೆಯು ಪ್ರಿಮಿಯಂ ಎಫ್‌ಎಆರ್ ಶುಲ್ಕವನ್ನಲ್ಲದೇ ಇತರ ಮೂಲಗಳಿಂದ ಬ್ಯಾಂಕ್ ಸಾಲವನ್ನು ಪಡೆಯಬಹುದು. ಉಳಿದ ಮೊತ್ತವನ್ನು ಪ್ರತಿವರ್ಷ ಮೇ ತಿಂಗಳಿನಲ್ಲಿ ವಾಣಿಜ್ಯ ಸಂಕೀರ್ಣದಿಂದ ಬರುವ ಬಾಡಿಗೆ ಮೊತ್ತದಿಂದ 1ಕೋಟಿ ರೂ. ಮೊತ್ತವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸುವುದು. ಈ ಮಾರುಕಟ್ಟೆ ಮಳಿಗೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ನಿಯಾಮಾನುಸಾರ ಕ್ರಮವಹಿಸುವುದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಪಾಲಿಕೆಯು ಭರಿಸುವ ಮೊತ್ತವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ಮುನ್ನ ಸರಕಾರದ ಪೂರ್ವಾನುಮೋದನೆ ಪಡೆಯಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ಹಲವು ಸಮಯದ ಪ್ರಯತ್ನವೊಂದು ಕೈಗೂಡಿದಂತಾಗಿದೆ.
ಹಿಂದಿನ ಸರಕಾರದ ಅವಧಿಯಲ್ಲಿ ಉರ್ವ ಮಾರುಕಟ್ಟೆ ಸಂಕೀರ್ಣವನ್ನು ಮುಡಾ ವತಿಯಿಂದ ನಿರ್ಮಿಸಲಾಗಿದ್ದು, ಇದು ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ಆ ಬಳಿಕ ನಮ್ಮ ಸರಕಾರ ಬಂದ ಬಳಿಕ ಅದನ್ನು ಪಾಲಿಕೆ ಸುಪರ್ದಿಗೆ ಪಡೆದುಕೊಳ್ಳುವ ಬಗ್ಗೆ ನಿರ್ಧರಿಸಿದ್ದೆವು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಸರಕಾರದ ಮಟ್ಟದಲ್ಲಿ ಈ ಪ್ರಕ್ರಿಯೆ ಆಗಬೇಕಿರುವುದರಿಂದ ಕಳೆದ 2ವರ್ಷಗಳಿಂದ ಸತತ ಪ್ರಯತ್ನಪಟ್ಟಿದ್ದು, ಇದೀಗ ಉರ್ವ ಮಾರುಕಟ್ಟೆ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಕೆಲಸಕ್ಕೆ ಅನುಮೋದನೆ ಸಿಕ್ಕಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗೆ, ನಗರಾಭಿವೃದ್ಧಿ ಸಚಿವರಿಗೆ ಧನ್ಯವಾದಗಳು.
– ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ