ಇತ್ತೀಚಿನ ಸುದ್ದಿ
ಅನ್ ಲಾಕ್: ಮತ್ತೆ ನಗರದತ್ತ ಮುಖ ಮಾಡಿದ ಭಾರಿ ಜನಸ್ತೋಮ; ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಫುಲ್ ಫುಲ್
21/06/2021, 14:54
ನವದೆಹಲಿ(reporterkarnataka news): ದೇಶದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಎರಡನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಜನರು ಮತ್ತೆ ನಗರದತ್ತ ಮುಖ ಮಾಡಿದ್ದಾರೆ. ಸಾವಿರಾರು ಜನರು ದಿಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ ನಗರವನ್ನು ಪ್ರವೇಶಿಸುತ್ತಿದ್ದಾರೆ. ಇದರ ಜತೆಗೆ ಅಂಗಡಿ ಮುಂಗಟ್ಟುಗಳು, ವ್ಯಾಪಾರೋದ್ಯಮ, ವಾಣಿಜ್ಯ ಚಟುವಟಿಕೆಗಳು ಮತ್ತೆ ಗರಿ ಬಿಚ್ಚಿದೆ.
ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರಿನಂತಹ ಮಹಾನಗರಗಳಿಂದ ತಮ್ಮ ತಮ್ಮ ಊರಿಗೆ ತೆರಳಿದ್ದ ಜನರು ಮತ್ತೆ ಹಿಂತಿರುಗುತ್ತಿದ್ದಾರೆ. ಬದುಕು ಕಟ್ಟಲು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯ ಜನರು ಏಕಾಏಕಿ ನಗರಗಳನ್ನು ಪ್ರವೇಶಿಸುತ್ತಿದ್ದಾರೆ. ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ,ಚಂಡಿಗಢ ಮುಂತಾದ ಕಡೆಗಳಲ್ಲಿ ಮಾರುಕಟ್ಟೆಗಳು, ಬಸ್ ನಿಲ್ಧಾಣ, ರೈಲ್ವೆ ನಿಲ್ದಾಣಗಳು ಜನ ಜಂಗುಳಿಯಿಂದ ತುಂಬಿ ಹೋಗಿದೆ.
ಅನ್‌ಲಾಕ್ ಪ್ರಕ್ರಿಯೆಯಿಂದ ನಗರಗಳಲ್ಲಿ ಉಂಟಾಗುತ್ತಿರುವ ಜನ ದಟ್ಟಣೆಯನ್ನುತಡೆಯಲು ಸೂಕ್ತ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವುದು ರಾಜ್ಯಗಳ ಜವಾಬ್ದಾರಿ ಎಂದಿರುವ ಕೇಂದ್ರ ಸರ್ಕಾರ ಸಲಹೆ ನೀಡಿದೆ.














