ಇತ್ತೀಚಿನ ಸುದ್ದಿ
ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಚಿಂತನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
13/07/2025, 11:22

*ಬಿ.ಪ್ಯಾಕ್ ಹಾಗೂ ಸಿಜಿಐ ವತಿಯಿಂದ ʼಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*
ಬೆಂಗಳೂರು(reporterkarnataka.com): ಸಂಘಟಿತ ಕಾರ್ಮಿಕರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಮಿಕ ನೀತಿಗಳನ್ನು ಸಂಯೋಜಿಸಿ “ನಾಲ್ಕು ಕೋಡ್”ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಿ.ಪ್ಯಾಕ್ ಮತ್ತು ಸಿಜಿಐ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ʼಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ೨೯ ಕಾರ್ಮಿಕ ನೀತಿಗಳು ಜಾರಿಯಲ್ಲಿದ್ದು, ಈ ಎಲ್ಲವೂ ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿತ್ತು. ಈಗಲೂ ಇದೇ ಕಾರ್ಮಿಕ ನೀತಿಯನ್ನೇ ಅನುಸರಿಸಲಾಗುತ್ತಿದೆ. ಈ ನೀತಿಯನ್ನು ಒಟ್ಟುಗೂಡಿಸಿ ನಾಲ್ಕು ಭಾಗವನ್ನಾಗಿ ಮಾಡಲು ಚಿಂತಿಸಲಾಗಿದೆ. ಸಂಘಟಿತರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಶೇ.೧೦ ರಷ್ಟು ಜನರು ಮಾತ್ರ ಸಂಘಟಿತ ಉದ್ಯೋಗಿಗಳಿದ್ದು, ಶೇ.೯೦ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಪ್ರಮುಖವಾಗಿ ಕೃಷಿ, ಕೂಲಿ ಕಾರ್ಮಿಕರೂ ಹೆಚ್ಚಿದ್ದಾರೆ. ಇವರಿಗೂ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ಅವಶ್ಯಕತೆ ಇದ್ದು, ಪಿಎಫ್‌ನಂತಹ ಯೋಜನೆಗಳಿಗೆ ಇವರನ್ನೂ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದರು.
ಇನ್ನೂ, ನಮ್ಮ ದೇಶದಲ್ಲಿ ಕ್ವಿಕ್ ಕಾಮರ್ಸ್ ಅಡಿಯಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ, ಪ್ರಸ್ತುತ ಸುಮಾರು ೬೦ಲಕ್ಷ ಜನರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ೧೦ ವರ್ಷಗಳಲ್ಲಿ ಇವರ ಸಂಖ್ಯೆ ೨೫ ಕೋಟಿ ಆಗುವ ಸಾಧ್ಯತೆ ಇದೆ. ಎಲ್ಲವೂ ಆನ್‌ಲೈನ್ ಅಡಿಯಲ್ಲಿ ಸುಲಭವಾಗಿ ಲಭ್ಯವಾಗುವ ಕಾಲ ಬಂದಿದೆ. ಈಗ ಪ್ರಮುಖ ನಗರಗಳಲ್ಲಿ ಮಾತ್ರ ಕ್ವಿಟ್ ಕಾಮರ್ಸ್ ಇದ್ದು, ಮುಂದಿನ ದಿನಗಳಲ್ಲಿ ಟಯರ್ ೨-೩ ಸಿಟಿಗಳಿಗೂ ವಿಸ್ತರಣೆಯಾಗಲಿದೆ. ಹೀಗಾಗಿ ಈ ಎಲ್ಲಾ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು “ಸೋಶಿಯಲ್ ಸೆಕ್ಯೂರಿಟಿ ಕೋಡ್” ಅಡಿಯಲ್ಲಿ ತರಲು ಮುಂದಾಗಿದ್ದೇವೆ ಎಂದು ಹೇಳಿದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಿ.ಪ್ಯಾಕ್ ಮುಂದಾಗಿರುವುದು ಶ್ಲಾಘನೀಯ. ಮಹಿಳಾ ಆಟೋ ಚಾಲಕರಿಯ ಸಂಖ್ಯೆ ಹೆಚ್ಚಾದರೆ ಮಹಿಳೆಯರು ಇನ್ನಷ್ಟು ಧೈರ್ಯವಾಗಿ ತಡರಾತ್ರಿ ಹಾಗೂ ಮುಂಜಾನೆ ಓಡಾಲು ಮುಂದಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಜಿಐ ಏಷಿಯಾ ಪೆಸಿಫಿಕ್ ವೈಸ್ ಪ್ರೆಸಿಡೆಂಟ್ ಶ್ರೀವಿದ್ಯಾ ನಟರಾಜ್, ವೈಸ್ ಪ್ರೆಸಿಡೆಂಟ್ ಸಾರಿಕಾ ಪ್ರಧಾನ್, ಸಿಎಸ್‌ಆರ್ ಮುಖ್ಯಸ್ಥರಾದ ಸುಧಾಕರ್ ಪೈ, ಬಿ.ಪ್ಯಾಕ್ ಸದಸ್ಯರಾದ ಮಿಮಿ ಪಾರ್ಥ ಸಾರಥಿ ಇದ್ದರು.
*೧೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಂಗಳಮುಖಿಯರಿಗೆ ತರಬೇತಿ:*
•ಬಿ.ಪ್ಯಾಕ್ ಮತ್ತು ಸಿಜಿಐ ವತಿಯಿಂದ 100ಕ್ಕೂ ಹೆಚ್ಚು ಮಹಿಳೆ ಮತ್ತು ಮಂಗಳಮುಖಿಯರಿಗೆ ಆಟೋ ಚಾಲನಾ ತರಬೇತಿ ನೀಡಲಾಗುತ್ತಿದೆ. 60 ದಿನಗಳ ತರಬೇತಿ ಇದಾಗಿದ್ದು, ಚಾಲನಾ ಕೌಶಲ್ಯ,ಜೀವನ ಕೌಶಲ್ಯ ಮತ್ತು ಆರ್ಥಿಕ ಸಾಕ್ಷರತೆ, ಚಾಲನಾ ಪರವಾನಗಿ ನೀಡುವುದು, ಸಮುದಾಯ ಸಂಪರ್ಕ ಮತ್ತು ಸಮನ್ವಯ ಅನೇಕ ಸೌಲಭ್ಯಗಳನ್ನು ಒದಗಿಸಲಿದೆ. ಬೆಂಗಳೂರಿನಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರನ್ನೂ ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ತರಲಾಗಿದೆ.