ಇತ್ತೀಚಿನ ಸುದ್ದಿ
ನಟ ಅನಂತನಾಗ್ ದಂಪತಿಯ ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ; ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿ
14/03/2025, 20:48

ಬೆಂಗಳೂರು(reporterkarnataka.com): ಕನ್ನಡ ಚಿತ್ರರಂಗದ ಹಿರಿಯ ನಟ, ಪದ್ಮಭೂಷಣ ಡಾ.ಅನಂತನಾಗ್ ದಂಪತಿಗೆ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೋಳಿ ಹಬ್ಬದ ಶುಭಾಶಯ ಕೋರಿ ಸನ್ಮಾನಿಸಿ ಕುಶಲೋಪರಿ ವಿಚಾರಿಸಿದರು.
ನಟ ಅನಂತನಾಗ ಅವರ ಬೆಂಗಳೂರಿನ ನಿವಾಸಕ್ಕೆ ಇಂದು ಸೌಹಾರ್ದಯುತ ಭೇಟಿ ನೀಡಿದ ಸಚಿವರು ಅನಂತನಾಗ ಮತ್ತು ಗಾಯತ್ರಿ ಅನಂತನಾಗ ಅವರಿಗೆ ಶಾಲು ಹೊದಿಸಿ, ಸುಸ್ಥಿರ ಹಸಿರು ಇಂಧನಕ್ಕೆ ಕೊಡುಗೆ ಎನ್ನುವಂತೆ ಗಿಡ ನೀಡಿ ಅಭಿನಂದಿಸಿದರು. ದಂಪತಿಯ ಕುಶಲೋಪರಿ ವಿಚಾರಿಸಿದ ಸಚಿವರು ಪರಸ್ಪರ ಹೋಳಿ ಹಬ್ಬದ ಶುಭಾಶಯ ಕೋರಿದರು. ಅನಂತನಾಗ್ ಅವರ ಗೃಹದಲ್ಲಿ ನಿರ್ಮಿಸಿದ್ದ ಆರ್ಟ್ ಗ್ಯಾಲರಿ ವೀಕ್ಷಿಸಿ ಸಂತಸಪಟ್ಟರು ಜೋಶಿ.
ಇದೇ ವೇಳೆ ಸಚಿವ ಪ್ರಲ್ಹಾದ ಜೋಶಿ ಮತ್ತು ಕಲಾವಿದ ಅನಂತನಾಗ ಅವರು ಕನ್ನಡ ಚಿತ್ರರಂಗದಲ್ಲಿನ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸಹಜ ಚರ್ಚೆ ನಡೆಸಿದರು. ನಮ್ಮ ಕಾಲದ ಸಿನಿ ರಂಗಕ್ಕೂ ಈಗಿನ ಚಿತ್ರೋದ್ಯಮಕ್ಕೂ ತುಂಬಾ ವ್ಯತ್ಯಾಸವಿದೆ. ಸರ್ವ ದಿಶೆಯಲ್ಲೂ ಸ್ಯಾಂಡಲ್ ವುಡ್ ಬದಲಾವಣೆ ಕಂಡಿದೆ ಎಂದು ಸುಪ್ರಸಿದ್ಧ ನಟ ಅನಂತನಾಗ ಅನಿಸಿಕೆ ಹಂಚಿಕೊಂಡರು.
ಪ್ರಸ್ತುತ ದಿನಮಾನದಲ್ಲಿ ಭಾರತದ ಅಭಿವೃದ್ಧಿಪರ ಓಟ, ದೇಶದ ವಿಶಿಷ್ಠ ಇತಿಹಾಸ ಹೀಗೆ ವಿಭಿನ್ನ ವಿಷಯಗಳ ಕುರಿತಂತೆ ಪರಸ್ಪರ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂಬುದನ್ನು ಸಚಿವ ಜೋಶಿ ವಿವರಿಸಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.