ಇತ್ತೀಚಿನ ಸುದ್ದಿ
ಉಳ್ಳಾಲ ಪರಿಸರದಲ್ಲಿ ಬೀದಿ ನಾಯಿಗಳ ಕಾಟ: 7ನೇ ತರಗತಿ ವಿದ್ಯಾರ್ಥಿ ಮೇಲೆ ಶ್ವಾನಗಳ ದಾಳಿ; ತೀವ್ರ ಗಾಯ
24/07/2024, 17:26
ಉಳ್ಳಾಲ(reporterkarnataka.com): ಉಳ್ಳಾಲ ಸುತ್ತಮುತ್ತಲ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರೈಮರಿ ಶಾಲೆಯ ವಿದ್ಯಾರ್ಥಿಯೊಬ್ಬನ ಮೇಲೆ 4- 5 ಬೀದಿ ನಾಯಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ.
ಮಂಗಳವಾರದಂದು ಬೆಳಿಗ್ಗೆ 7ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗುವಾಗ ನಾಲ್ಕೈದು ಬೀದಿ ನಾಯಿಗಳು ಸೇರಿ ದಾಳಿ ಮಾಡಿವೆ. ಅದೃಷ್ಟವಶಾತ್ ಆಟೊ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿರುತ್ತದೆ. ಗಾಯಗೊಂಡ ವಿದ್ಯಾರ್ಥಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತೀಚಿಗೆ ಉಳ್ಳಾಲ ಪರಿಸರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳ ಓಡಾಟ ಹೆಚ್ಚಾಗಿದೆ. ಶಾಲೆಗೆ ಮತ್ತು ಮದರಸ ಹೋಗುವ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಯಾವ ಸಂದರ್ಭದಲ್ಲಿ ಈ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಹೇಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಘಟನೆ ನಡೆದ ಬಳಿಕ ಸೂಕ್ತ ಕ್ರಮ ಅಂತಹ ಹೇಳಿಕೆ ನೀಡಿ, ಘಟನಾ ಸ್ಥಳಕ್ಕೆ ಭೇಟಿ ನೀಡುವ ಬದಲು ಈ ಬೀದಿ ನಾಯಿಗಳನ್ನು ನಿಯಂತ್ರಣದಲ್ಲಿ ಇಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದೆ ಹೋದಲ್ಲಿ ಬೀದಿ ನಾಯಿಗಳ ಹುಚ್ಚಾಟಕ್ಕೆ ಹಲವಾರು ಮಕ್ಕಳ ಬಲಿಯನ್ನು ನೀಡಬೇಕಾಗಿ ಬರಬಹುದು.
ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಉಳ್ಳಾಲ ನಗರ ಸಭೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗಿದೆ. ಶೀಘ್ರ ಕ್ರಮಕೈಗೊಳ್ಳದಿದ್ದರೆ ಈ ಬಗ್ಗೆ ಜನಜಾಗ್ರತಿಯನ್ನು ಮೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ತೌಸೀನ್ ಅಳೆಕಲ ಎಚ್ಚರಿಕೆ ನೀಡಿದ್ದಾರೆ.