ಇತ್ತೀಚಿನ ಸುದ್ದಿ
ತುಳು, ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣ ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು: ಮಾಜಿ ಸಚಿವ ಅಭಯಚಂದ್ರ ಜೈನ್
06/08/2022, 16:34

ಮಂಗಳೂರು(reporterkarnataka.com) : ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣವನ್ನು ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು, ಜಗತ್ತಿನಲ್ಲಿ ಎಲ್ಲೂ ಎರಡು ಭಾಷೆಯಲ್ಲಿ ಒಂದೇ ಕವಿ ರಾಮಾಯಣವನ್ನು ರಚಿಸಿದ ಉಲ್ಲೇಖಗಳಿಲ್ಲ. ಮಂದಾರ ಕೇಶವ ಭಟ್ಟರಿಗೆ ಮಾತ್ರ ಇದು ಸಾಧ್ಯವಾಯಿತು ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಶ್ಲಾಘಿಸಿದರು.
ಸಾಂಸ್ಕೃತಿಕ ನಗರಿ ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಮಂದಾರ ರಾಮಾಯಣ ಎಂಬ ಕನ್ನಡ ಮತ್ತು ತುಳು ಸರಳ ಆಡು ಭಾಷೆಯಲ್ಲಿ ರಚಿತವಾಗಿದ್ದು, ಇದು ಸಾಮಾನ್ಯ ಜನರಿಗೂ ರಾಮಾಯಣವನ್ನು ತಿಳಿಸುವ ಕವಿ ಉದ್ದೇಶವನ್ನು ತಿಳಿಸುತ್ತದೆ. ಕವಿ ಮಂದಾರರ ರಾಮಾಯಣವನ್ನು ತಿಳಿಸುವ ಸಪ್ತಾಹಕ್ಕೆ ಯಶಸ್ಸಾಗಲಿ. ನಾವೆಲ್ಲರೂ ಕವಿ ಮಂದಾರರ ರಾಮಾಯಣದ ಆದರ್ಶಗಳನ್ನು
ಪಾಲಿಸೋಣ, ಮಂದಾರರ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಬರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಸರಪಾಡಿ ಹಾಗೂ ದಾಮೋದರ ನಿಸರ್ಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್. ಡಿ. ಸಂಪತ್ ಸಾಮ್ರಾಜ್ಯ, ಅಬ್ದುಲ್ಲಾ ಪುತ್ತಿಗೆ, ಮಂದಾರರ ಪುತ್ರಿ ಶಾಂಭವಿ ಬಾಲಕೃಷ್ಣ ಭಟ್, ದಿನೇಶ್ ಆನಡ್ಕ, ಸಂಘಟಕರಾದ ಡಾ. ರಾಜೇಶ್ ಆಳ್ವ, ಧನಕೀರ್ತಿ ಬಲಿಪ, ಡಾ.ಮಂದಾರ ರಾಜೇಶ್ ಭಟ್, ಚಂದ್ರಹಾಸ ದೇವಾಡಿಗ, ಭಾಸ್ಕರ ಕಾಸರಗೋಡು, ಪ್ರಮೋದ್ ಸಪ್ಪೆ, ಮಂದಾರ ಶಾರದಾಮಣಿ ಉಪಸ್ಥಿತರಿದ್ದರು.
ದಿನಕರ ಪಚ್ಚನಾಡಿ, ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ಕಂಠಸಿರಿಯಿಂದ ಮೂಡಿಬಂದ ವಾಚನ ವ್ಯಾಖ್ಯಾನ ಕಾರ್ಯಕ್ರಮ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.