ಇತ್ತೀಚಿನ ಸುದ್ದಿ
ತ್ರಾಸಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ. ವಂಚನೆ; ರಾಜಕಾರಣಿಗಳ ಹೆಸರಿನಲ್ಲಿ ಪಂಗನಾಮ
07/08/2022, 19:47
ಕುಂದಾಪುರ(reporterkarnataka.com): ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದಲ್ಲಿ ನಡೆದಿದೆ.
ತ್ರಾಸಿ ನಿವಾಸಿ ರೆಹಾನ್ ಅಹಮ್ಮದ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ ಒಂದು ವರ್ಷದ ಹಿಂದೆ ಲತೇಶ್ ಸಂಜೀವ ಕುಂಬ್ಲೆ ಎಂಬವರ ಪರಿಚಯವಾಗಿತ್ತು. ಆತ ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆಯೆಂದು ಕೆಲವು ರಾಜಕಾರಣಿಗಳ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ತೋರಿಸಿದ್ದಾನೆ. ಅಲ್ಲದೆ, ರೆಹಾನ್ ಅವರ ಅಕ್ಕ ಸಬೀನಾ ಅಖ್ತರ್ ಅವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, 10 ಲಕ್ಷ ರೂ. ಕೇಳಿದ್ದನು. ಅದರಂತೆ ರೆಹಾನ್ ಅವರು ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೂ ಕೆಲಸವನ್ನು ಕೊಡಿಸಿಲ್ಲ. ಅದನ್ನು ಪ್ರಶ್ನಿಸಿದಾಗ ಆರೋಪಿ ಲತೇಶ್ 6 ಲಕ್ಷ ರೂ. ವಾಪಸು ನೀಡುವುದಾಗಿ ಹೇಳಿ, ಹೆಚ್.ಡಿ.ಎಫ್.ಸಿ ಬ್ಯಾಂಕಿನ ಚೆಕ್ ನ್ನು ನೀಡಿದ್ದನು. ಅದನ್ನು ಬ್ಯಾಂಕ್ ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಆರೋಪಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಬಳಿಕ ಕೆಲಸ ಕೊಡಿಸದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.