4:12 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ತುಂಗಭದ್ರಾ ಜಲಾಶಯದ ಅವಘಡ: ಬಳ್ಳಾರಿ ಜಿಲ್ಲೆಯಲ್ಲಿ ಕೆಲವಡೆ ಬಿತ್ತನೆಗೆ ತೊಂದರೆ

12/08/2024, 17:21

ಗಣೇಶ ಇನಾಂದಾರ ಬಳ್ಳಾರಿ

info.reporterkarnataka@gmail.com

ಬಳ್ಳಾರಿಯ ಜೀವನಾಡಿ ತುಂಗಭದ್ರಾ ಜಲಾಶಯ ನಮ್ಮ ಕೈಬಿಡುವುದಿಲ್ಲ ಎಂದು ನಂಬಿದ್ದ ರೈತರಿಗೆ ಜಲಾಶಯದ 19ನೇ (ಕರ್ನಾಟಕ ಭಾಗದ) ಗೇಟ್‌, ಸರಪಳಿ ಕಳಚಿದ ಅವಘಡದಿಂದ ಕೆಲವಡೆ ಬಿತ್ತನೆಗೆ ತೊಂದರೆಯಾಗಿದೆ.
ಶನಿವಾರ ಸಂಜೆಯಷ್ಟೇ 105 ಟಿಎಂಸಿ ನೀರಿನೊಂದಿಗೆ ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿತ್ತು. ಒಂದು ಬೆಳೆಯಲ್ಲ. ಈ ಭಾರಿ ಎರಡನೇ ಬೆಳೆಗೂ ಜಲಾಶಯ ನೀರುಣಿಸುತ್ತದೆ ಎಂಬ ದೃಢವಾದ ನಂಬಿಕೆಯಲ್ಲಿ ರೈತರಿದ್ದರು. ಆದರೆ, ರಾತ್ರಿ 10.50ರಲ್ಲಿ ಸಂಭವಿಸಿರುವ ಅವಘಡವೊಂದು ಆ ನಂಬಿಕೆಗೆ ಭಂಗ ತಂದಿದೆ. 
ಜಲಾಶಯದ 19ನೇ (ಕರ್ನಾಟಕ ಭಾಗದ) ಗೇಟ್‌, ಸರಪಳಿ ಕಳಚಿಕೊಂಡು ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ನೀರು ಅನಿಯಂತ್ರಿತವಾಗಿ ನದಿಗೆ ಹರಿದು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಹರಿದುಬರಲಿರುವ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದ್ದರೆ ಗೇಟ್‌ ದುಸ್ತಿಯಾಗಬೇಕು. ಗೇಟ್‌ ದುರಸ್ತೆಯಾಗಬೇಕಿದ್ದರೆ  ಸದ್ಯ ಜಲಾಶಯದಲ್ಲಿನ 20 ಅಡಿಯಷ್ಟು ನೀರನ್ನು ಖಾಲಿ ಮಾಡಬೇಕಾದ ಸಂದಿಗ್ಧತೆ ಸದ್ಯ ಎದುರಾಗಿದೆ. ಅಂದರೆ ಹೆಚ್ಚುಕಡಿಮೆ 60 ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದಾರೆ. 
ಇದರೊಂದಿಗೆ ಎರಡನೇ ಬೆಳೆಯ ನಿರೀಕ್ಷೆ ಇರಲಿ, ಮೊದಲೇ ಬೆಳೆಗೆ ನೀರಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ. ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಈ ತಿಂಗಳಿಂದ ಬಿತ್ತನೆ, ನಾಟಿ ಆರಂಭವಾಗಿದ್ದವು. ಅಂದಾಜು ಶೇ. 45ರಿಂದ ಶೇ. 50 ಬಿತ್ತನೆ, ನಾಟಿ ಆಗಿತ್ತು. ಇನ್ನೂ ಕೆಲ ರೈತರು ಈಗಷ್ಟೇ ಬಿತ್ತನೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದರು. ಹೀಗಾಗಿ ಬೆಳೆ ರಕ್ಷಣೆ, ಬಿತ್ತನೆ ಮೇಲೆ ತುಂಗಭದ್ರಾದಲ್ಲಿನ ಅವಘಡ ಪ್ರಭಾವಬೀರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆಯ ಉಪ ನಿರ್ದೇಶಕ ಕೆಂಗೇಗೌಡ, ‘ತುಂಗಭದ್ರಾ ಜಲಾಶಯದಲ್ಲಿ ಸಂಭವಿಸಿರುವ ಅವಘಡ ಜಿಲ್ಲೆಯ ಕೃಷಿ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಖಚಿತವಾಗಿ ಹೇಳುವುದು ಈ ಸಂದರ್ಭದಕ್ಕೆ ಕಷ್ಟ. ಒಂದು ವೇಳೆ ನೀರು ಖಾಲಿಯಾದರೆ, ಮುಂಗಾರು ಹಂಗಾಮಿನ ಬೆಳೆಗೇ ನೀರು ಹೊಂದಿಸುವುದು ಕಷ್ಟವಾಗುವುದಂತೂ ನಿಶ್ಚಿತ. ಇನ್ನು ಎರಡು ದಿನದಲ್ಲಿ ಏನಾಗಲಿದೆ, ಎಷ್ಟು ನೀರು ಖಾಲಿಯಾಗಲಿದೆ, ಎಷ್ಟು ನೀರು ಉಳಿಯುತ್ತದೆ, ಎಷ್ಟು ನೀರು ನಮಗೆ ದಕ್ಕಲಿದೆ ಎಂಬುದು ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಸದ್ಯ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಈಗಾಗಲೇ ಶೇ 50ರಷ್ಟು ಬಿತ್ತನೆಯಾಗಿದೆ.
ಇನ್ನುಳಿದ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಭರದಿಂದ ಸಾಗುತ್ತಿದೆ. ನೀರು ಅಲಭ್ಯವಾದರೆ ಬಿತ್ತನೆ ಮೇಲೆ ಪರಿಣಾಮ ಬೀರುತ್ತದೆ. ಅದೇ ವೇಳೆ ಬೆಳೆ ರಕ್ಷಣೆಗೂ ಸಮಸ್ಯೆಯಾಗುತ್ತದೆ. ಹಾಗೊಂದು ವೇಳೆ ಜಲಾಶಯದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದರೆ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ನಾವು ಸಲಹೆ ನೀಡಲಿದ್ದೇವೆ. ಆದರೆ, ಈಗಲೇ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.  

ಇತ್ತೀಚಿನ ಸುದ್ದಿ

ಜಾಹೀರಾತು