ಇತ್ತೀಚಿನ ಸುದ್ದಿ
ತೊಕ್ಕೊಟ್ಟು ಸಮೀಪ ಯದ್ವಾತದ್ವಾ ಚಲಿಸಿ ಡಿಕ್ಕಿ ಹೊಡೆದ ಕಾರು: 3 ಹಸುಗಳ ದಾರುಣ ಸಾವು, ಕರು ಚಿಂತಾಜನಕ; ಕಾರು ವೈದ್ಯರದ್ದೇ?
09/07/2023, 13:42

ಮಂಗಳೂರು(reporterkarnataka.com): ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ
ಕುತ್ತಾರು ಪಂಡಿತ್ ಹೌಸ್ ಬಳಿ ಯದ್ವಾತದ್ವಾ ಚಲಿಸಿದ ಕಾರೊಂದು ಬಾಯಿ ಬಾರದ ಮೂರು ಹಸುಗಳನ್ನು ಬಲಿ ಪಡೆದು, ಕರುವೊಂದನ್ನು ಗಂಭೀರವಾಗಿ ಗಾಯಗೊಳಿಸಿ ಪಲ್ಟಿಯಾದ ಭಯಾನಕ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಯುವಕ ಹಾಗೂ ಯುವತಿಯರಿದ್ದ ಕ್ರೆಟಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೂರು ಗೋವುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ 3.45ರ ವೇಳೆ ಘಟನೆ ನಡೆದಿದೆ.
ದೇರಳಕಟ್ಟೆಯಿಂದ ತೊಕ್ಕೊಟ್ಟಿನ ಕಡೆ ಧಾವಿಸುತ್ತಿದ್ದ ಕ್ರೆಟಾ ಕಾರು
ಯದ್ವಾತದ್ವಾ ಚಲಿಸಿದ ಕಾರಣ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಬಳಿ ಕರುವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರು ಗಂಭೀರ ಗಾಯಗೊಂಡಿದೆ. ಅಲ್ಲಿಂದ ಮುಂದಕ್ಕೆ ಚಲಿಸಿದ ಕಾರು ಪಂಡಿತ್ ಹೌಸ್ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿದ್ದ ಎರಡು ಹಸು ಮತ್ತೊಂದು ಹೋರಿಗೆ ರಭಸವಾಗಿ ಬಡಿದು ಪಲ್ಟಿಯಾಗಿ ಉರುಳಿ ಬಿದ್ದಿದೆ.
ಅಪಘಾತದ ತೀವ್ರತೆಗೆ ಮೂರು ಗೋವುಗಳ ಕರುಳು ಹೊರ ಬಂದು ಸ್ಥಳದಲ್ಲೇ ಸಾವನ್ನಪ್ಪಿವೆ. ಕಾರಿನಲ್ಲಿ ಯುವತಿಯರು ಹಾಗೂ ಯುವಕರಿದ್ದರೆಂದು ಹೇಳಲಾಗಿದ್ದು, ಅವರನ್ನು ದೇರಳಕಟ್ಟೆಯ ದಾಖಲಿಸಲಾಗಿದೆ. ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸವಾರರಲ್ಲಿ ಓರ್ವ ವೈದ್ಯನಾಗಿದ್ದು ಬಾಕಿ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.