ಇತ್ತೀಚಿನ ಸುದ್ದಿ
ತೊಕ್ಕೊಟ್ಟು ಜಂಕ್ಷನ್; ದಿನದ 24 ತಾಸು 110 ಅಡಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ!: ಶಾಸಕ ಖಾದರ್ ಈ ಕುರಿತು ಹೇಳಿದ್ದೇನು?
20/07/2022, 18:10

ಮಂಗಳೂರು(reporterkarnataka.com): ಉಳ್ಳಾಲದ ಗೇಟ್ ವೇ ಎಂದೇ ಪರಿಗಣಿಸಲಾದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು 24 ಗಂಟೆಗಳ ಕಾಲ ಹಾರಾಟ ಮಾಡಲು ಧ್ವಜಸ್ತಂಭ ಸಿದ್ಧವಾಗಿದ್ದು ಉಳ್ಳಾಲವನ್ನು ಪಾಕಿಸ್ತಾನ ಅಂತ ಹೇಳಿದವರಿಗೆ ಇದು ಪರದೇಶ ಅಲ್ಲ, ನಮ್ಮ ದೇಶ ಎಂಬ ಭಾವನೆ ಬರಲಿದೆ ಎಂದು ಪ್ರತಿಪಕ್ಷದ ಉಪ ನಾಯಕ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಪರೋಕ್ಷ ಟಾಂಗ್ ನೀಡಿದ್ದಾರೆ.
ಉಳ್ಳಾಲ ಓವರ್ ಬ್ರಿಡ್ಜ್ ಬಳಿ ಧ್ವಜಸ್ತಂಭ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮ ಜತೆ ಮಾತನಾಡಿದ ಖಾದರ್, ಉಳ್ಳಾಲದ ಜನತೆಯ ಗೌರವದ ಸಂಕೇತವಾಗಿ ಧ್ವಜಸ್ತಂಭ ನಿರ್ಮಾಣವಾಗಿದೆ. ಅದರ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭ ದಾಖಲೆ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಕುತ್ತಾರು ದೇರಳಕಟ್ಟೆ ರಸ್ತೆಯ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶ್ರೀನಿವಾಸ ಮಲ್ಯ ಪ್ರತಿಮೆಯ ನಿರ್ಮಾಣ ಕಾರ್ಯವೂ ನಡೆಯಲಿದೆ ಎಂದರು.
ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಒಟ್ಟು ಎರಡು ಧ್ವಜಸ್ತಂಭ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಸ್ಥಳಾಂತರ ಮಾಡಲೂ ಅಡ್ಡಿಯಿಲ್ಲ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.