ಇತ್ತೀಚಿನ ಸುದ್ದಿ
ಥಾಣೆ: 40ನೇ ಮಹಡಿಯಿಂದ ಲಿಫ್ಟ್ ಕುಸಿದು 7 ಮಂದಿ ಕಾರ್ಮಿಕರ ದಾರುಣ ಸಾವು
11/09/2023, 12:43

ಮುಂಬೈ(reporterkarnataka.com): ಮಹಾರಾಷ್ಟ್ರ ಥಾಣೆಯಲ್ಲಿ ಲಿಫ್ಟ್ ವೊಂದು ಏಕಾಏಕಿ 40ನೇ ಮಹಡಿಯಿಂದ ಒಮ್ಮೆಲೆ ನೆಲ ಮಾಳಿಗೆಗೆ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.
ಅವಘಡದಲ್ಲಿ ಮೃತಪಟ್ಟವರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿಥ್ಲೇಶ್ (35), ಕರಿದಾಸ್ (38) ಮತ್ತು ಸುನೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರೆಲ್ಲ ಕಟ್ಟಡ ಕಾರ್ಮಿಕರಾಗಿದ್ದು ಲಿಫ್ಟ್‌ನಲ್ಲಿ ಇಳಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಿಫ್ಟ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಲಿಫ್ಟ್‌ನ ಕೇಬಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ