ಇತ್ತೀಚಿನ ಸುದ್ದಿ
ತಾಯಿಗೆ ಅವಾಚ್ಯ ಪದದಿಂದ ನಿಂದನೆ: ಮರದ ದೊಣ್ಣೆಯಿಂದ ಹೊಡೆದು ಯುವಕನ ಭೀಕರ ಕೊಲೆ
22/07/2022, 11:31
ಉಡುಪಿ(reporterkarnataka.com):
ಕುಡಿದ ಅಮಲಿನಲ್ಲಿ ತಾಯಿಗೆ ನಿಂದಿಸಿದ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಮರದ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ತಮಿಳುನಾಡು ಮೂಲದ ಕುಮಾರ್(32) ಎಂದು ಗುರುತಿಸಲಾಗಿದೆ. ಕುಟ್ಟಿ ಮತ್ತು ನವೀನ್ ಎಂಬವರು ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕುಟ್ಟಿ ಮತ್ತು ನವೀನ್ ಇಂದ್ರಾಳಿ ಗುರು ಬಾರ್ ನಿಂದ ಮದ್ಯಪಾನ ಮಾಡಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಕುಮಾರ್ ಕುಡಿದ ಅಮಲಿನಲ್ಲಿ ನವೀನ್ ಮತ್ತು ಕುಟ್ಟಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಮೂವರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ನವೀನ್ ಮತ್ತು ಕುಟ್ಟಿ ಅಲ್ಲೆ ಇದ್ದ ಮರದ ದೊಣ್ಣೆಯಿಂದ ಕುಮಾರನ ತಲೆಗೆ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಕುಮಾರ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.